ಭಾರತೀಯ ಚಿತ್ರರಂಗದಲ್ಲಿ ದುಃಖ ಮನೆ ಮಾಡಿದೆ. ಕಳೆದರಡು ದಿನದಲ್ಲಿ ಮೂರು ಸಾವುಗಳು ಸಂಭವಿಸಿವೆ. ಪಮೇಲಾ ಚೋಪ್ರಾ, ಫಾತಿಮಾ ಇಸ್ಮಾಯಿಲ್ ಸಾವಿನ ಸುದ್ದಿ ಮಾಸುವ ಮುನ್ನವೇ ಮತ್ತೊಂದು ನಿಧನದ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ನೋವು ತಂದಿದೆ.
ರಾಜೇಶ್ ಮಾಸ್ಟರ್ ಆತ್ಮಹತ್ಯೆ?: ದಕ್ಷಿಣ ಚತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ಇಂದು ನಿಧನರಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂಬ ವರದಿ ಕೂಡಾ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ಸಿನಿಮಾ ಇಂಡಸ್ಟ್ರಿ ಕಂಬನಿ:ರಾಜೇಶ್ ಮಾಸ್ಟರ್ ನಿಧನದ ಸುದ್ದಿಯಿಂದ ಚಿತ್ರರಂಗದಲ್ಲಿ ಶೋಕದ ಅಲೆ ಎದ್ದಿದೆ. ಚಿತ್ರೋದ್ಯಮದ ಹಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ವಿಷಯ ತಿಳಿದ ಅಭಿಮಾನಿಗಳೂ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಿದ್ಧ ನೃತ್ಯ ನಿರ್ದೇಶಕ: ದಕ್ಷಿಣ ಚಲನಚಿತ್ರೋದ್ಯಮದ ಪ್ರಸಿದ್ಧ ನೃತ್ಯ ನಿರ್ದೇಶಕರಾಗಿದ್ದ ಮೃತ ರಾಜೇಶ್ ಮಾಸ್ಟರ್ ಅವರು, ಎಲೆಕ್ಟ್ರೋ ಬ್ಯಾಟಲ್ ಎಂಬ ನೃತ್ಯ ತಂಡ ಕಟ್ಟಿಕೊಂಡಿದ್ದರು. ಇದಲ್ಲದೇ ಅವರು FEFKA ನೃತ್ಯಗಾರರ ಒಕ್ಕೂಟದ ಸದಸ್ಯರೂ ಆಗಿ ತಮ್ಮದೇ ಆದ ಸೇವೆ ಸಲ್ಲಿಕೆ ಮಾಡುತ್ತಿದ್ದರು . ಡ್ಯಾನ್ಸ್ ಮಾಸ್ಟರ್ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಬಹಳ ಪ್ರಸಿದ್ಧರಾಗಿದ್ದರು.
ಬೀನಾ ಆ್ಯಂಟೋನಿ ಸಂತಾಪ:ಸಿನಿಮಾ ಮತ್ತು ಕಿರುತೆರೆ ಲೋಕದ ಖ್ಯಾತ ನಟಿ ಹಾಗೂ ರಾಜೇಶ್ ಅವರ ಆಪ್ತ ಸ್ನೇಹಿತೆ ಬೀನಾ ಆ್ಯಂಟೋನಿ ಅವರು ರಾಜೇಶ್ ಮಾಸ್ಟರ್ ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾವಿನ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದು, "ನಿಮ್ಮ ನಿರ್ಗಮನದಿಂದಾಗಿ ಬಹಳ ದುಃಖವಾಗಿದೆ. ಇದರಿಂದ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ. ಅಂತಹ ಮಾರಣಾಂತಿಕ ಹೆಜ್ಜೆಯನ್ನು ಇಡಲು ನಿಮ್ಮನ್ನು ಒತ್ತಾಯಿಸಿದ್ದಾದರು ಏನು? ಎಂದು ಬರೆದುಕೊಂಡಿದ್ದಾರೆ.