ನೆಲ್ಲೂರು (ಆಂಧ್ರಪ್ರದೇಶ): "ಅಮ್ಮ, ಅಪ್ಪ, ತಂಗಿ.. ನನ್ನನ್ನು ಕ್ಷಮಿಸಿ.. ನೃತ್ಯ ನಿರ್ದೇಶಕರಿಗೆ ನಾನು ನೋವುಂಟು ಮಾಡುತ್ತಿದ್ದೇನೆ. ಸಾಲ ಹೆಚ್ಚಾಗಿದೆ. ತೀರಿಸಲಾಗದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಕೊರಿಯೊಗ್ರಾಫರ್ ಚವಾ ಚೈತನ್ಯ (32) ಎಂಬವರು ವಿಡಿಯೋ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ನೆಲ್ಲೂರು ಕ್ಲಬ್ ಹೋಟೆಲ್ನಲ್ಲಿ ಘಟನೆ ನಡೆದಿದೆ.
ಸೆಲ್ಫಿ ವಿಡಿಯೋದಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ, ಚಾವ ಚೈತನ್ಯ ಲಿಂಗಸಮುದ್ರ ತಾಲೂಕಿನ ಮುತ್ತವಾರಿಪಾಲೇನಿಯ ಲಕ್ಷ್ಮೀರಾಜ್ಯಮ್ ಸುಬ್ಬರಾವ್ ದಂಪತಿಯ ಪುತ್ರ. ನೃತ್ಯ ಸಂಯೋಜಕರಾಗಿ ಜೀವನ ಸಾಗಿಸುತ್ತಿದ್ದರು. ತಾಯಿ, ತಂದೆ ಮತ್ತು ತಂಗಿಯೊಂದಿಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಹಲವು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ನೃತ್ಯ ಕಾರ್ಯಕ್ರಮಗಳಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಶ್ವ ನೃತ್ಯ ದಿನಾಚರಣೆಯ ನಿಮಿತ್ತ ನಗರದ ಕಲಾಂಜಲಿ ಆರ್ಕೆಸ್ಟ್ರಾ ಮತ್ತು ಇವೆಂಟ್ಸ್‌ನ ಸಂಘಟಕರು ಇದೇ 29 ರಂದು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಚೈತನ್ಯರನ್ನು ಆಹ್ವಾನಿಸಿದ್ದರು. ಈ ಕಾರ್ಯಕ್ರಮಕ್ಕೆಂದು ನೆಲ್ಲೂರು ತಲುಪಿದ ಅವರು ಬಾರಾಶಾಹಿದ್ ದರ್ಗಾ ಬಳಿಯ ನೆಲ್ಲೂರು ಕ್ಲಬ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಶನಿವಾರ ಪುರ ಮಂದಿರದಲ್ಲಿ ಕಲಾಂಜಲಿ ಆರ್ಕೆಸ್ಟ್ರಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಸಂಜೆ ಸೆಲ್ಫಿ ವಿಡಿಯೋ ಮಾಡಿ, ಸಾಲ ತೀರಿಸಲಾಗದೇ ಸಾಯುತ್ತಿದ್ದೇನೆ, ನನ್ನ ಕ್ಷಮಿಸಿ ಎಂದು ತಂದೆ-ತಾಯಿ, ತಂಗಿ, ಸ್ನೇಹಿತರಿಗೆ ಸಾವಿನ ಕಾರಣ ತಿಳಿಸಿದ್ದಾರೆ. ವಿಡಿಯೋವನ್ನು ತನ್ನ ಸ್ನೇಹಿತರ ಮೊಬೈಲ್ಗೆ ಕಳುಹಿಸಿ, ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.