ಕನ್ನಡ ಚಿತ್ರರಂಗದ ಯುವಸಾಮ್ರಾಟ್ ಎಂದೇ ಖ್ಯಾತರಾಗಿದ್ದ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಅಗಲಿ ಇಂದಿಗೆ ಮೂರು ವರ್ಷ. ಈ ಮೂರು ವರ್ಷದಲ್ಲಿ ನಮ್ಮ ಸುತ್ತಮುತ್ತ ಅನೇಕ ಬದಲಾವಣೆಗಳಾಗಿವೆ. ಆದರೆ ಅವರ ಪತ್ನಿ ಮೇಘನಾ ರಾಜ್ ಹಾಗೂ ಮತ್ತು ಚಿರಂಜೀವಿ ಅವರ ಸಹೋದರ ಧ್ರುವ ಸರ್ಜಾ ಮನಸ್ಸಿನಲ್ಲಿ ಆ ನೋವು ಇನ್ನೂ ಹಾಗೆ ಇದೆ. ಪ್ರೀತಿಪಾತ್ರರ ಅಗಲಿಕೆಯ ನೋವಿಗೆ ಮದ್ದಿಲ್ಲ. ಪ್ರತಿ ಕ್ಷಣ ಆ ನೋವು ಇದ್ದೇ ಇರುತ್ತದೆ. ಇಂದು ಚಿರು ಭಾವ ಚಿತ್ರಕ್ಕೆ ನಮನ ಸಲ್ಲಿಸುವ ವೇಳೆ ಸಹೋದರನನ್ನು ನೆನೆದು ನಟ ಧ್ರುವ ಸರ್ಜಾ ಭಾವುಕರಾದರು. ಚಿರು ಪತ್ನಿ ಮೇಘನಾ ರಾಜ್ ಕಣ್ಣು ತುಂಬಿಬಂದಿತ್ತು.
ಚಿರು ಅಗಲಿಕೆ ವೇಳೆ ಮೇಘನಾ ರಾಜ್ ತುಂಬು ಗರ್ಭಿಣಿ ಆಗಿದ್ದರು. ಮನದಲ್ಲಿ ಹತ್ತು ಹಲವು ಆಸೆಗಳನ್ನು ಇಟ್ಟುಕೊಂಡಿದ್ದ ಮೇಘನಾ ಬದುಕಿನಲ್ಲಿ ಮೂರು ವರ್ಷದ ಹಿಂದೆ ಇದೇ ದಿನ ನಡೆದಿದ್ದು ಮಾತ್ರ ದುರಂತ. ಮೇಘನಾ ಗರ್ಭದಲ್ಲಿದ್ದ ಆ ಪುಟ್ಟ ಮಗು ತಂದೆ ಪ್ರೀತಿಯಿಂದ ವಂಚಿತವಾಯ್ತು. ಆದ್ರೆ ಅಪ್ಪನ ಪ್ರೀತಿಯನ್ನು ರಾಯನ್ಗೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದಾರೆ ಮೇಘನಾ ರಾಜ್. ರಾಯನ್ಗೆ ತಾಯಿಯಾಗಿ ಮಾತ್ರವಲ್ಲದೇ, ತಂದೆಯ ಜವಾಬ್ದಾರಿಯನ್ನೂ ಸಹ ನಿರ್ವಹಿಸುತ್ತಿದ್ದಾರೆ. ಇಂದು ಚಿರು ಭಾವ ಚಿತ್ರಕ್ಕೆ ಪುತ್ರ ರಾಯನ್ ಪುಷ್ಪಾರ್ಚನೆ ಮಾಡುವ ವೇಳೆ ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು.
ಅಂದಹಾಗೆ, ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗ ಕಂಡ ಉತ್ತಮ ನಟ. 1984ರ ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಇವರು 2009ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅತಿ ಕಡಿಮೆ ಅವಧಿಯಲ್ಲಿ ಸಿನಿಮಾ ರಂಬ ಬಣ್ಣದ ಲೋಕದಲ್ಲಿ ಭದ್ರ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಅಂದಿನ ಸಮಯದಲ್ಲಿ ಚಿರು ಬಹುಬೇಡಿಕೆ ನಟನಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ದರು. 2009ರಲ್ಲಿ 'ವಾಯುಪುತ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು, ಸೀಜರ್, ಸಿಂಗ, ಅಮ್ಮಾ ಐ ಲವ್ ಯೂ, ಚಿರು, ಗಂಡೆದೆ, ರುದ್ರತಾಂಡವ, ವರದನಾಯಕ, ರಾಮಲೀಲಾ, ಚಂದ್ರಲೇಖ ಸೇರಿ ಸುಮಾರು 22 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.