ಭಾರತೀಯ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಭಿಮಾನಿಗಳು, ನೆಟ್ಟಿಗರು ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕೂಡ ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರ ಬಗ್ಗೆ ಅನುಚಿತ ಹೇಳಿಕೆ ನೀಡಿದ ವಿಚಾರವಾಗಿ ಮಾತ್ರವಲ್ಲದೇ, ಮಹಿಳೆಯರ ಬಗ್ಗೆ ಅವರು ತೋರಿರುವ ಅಗೌರವಕ್ಕಾಗಿ ಹಿರಿಯ ನಟ ಚಿರಂಜೀವಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಮಾಧ್ಯಮಗೋಷ್ಟಿಯೊಂದರಲ್ಲಿ ಮನ್ಸೂರ್ ಅಲಿ ಖಾನ್, ಸಹನಟಿ ತ್ರಿಶಾ ಬಗ್ಗೆ ಮಾತನಾಡಿದ್ದರು. ಸಿನಿಮಾದಲ್ಲಿ ತ್ರಿಶಾ ಅವರೊಂದಿಗೆ 'ಬೆಡ್ ರೂಮ್ ಸೀನ್' ಅನ್ನು ಮಿಸ್ ಮಾಡಿಕೊಂಡಿರುವುದಾಗಿ ಅಸಹ್ಯಕರ ಕಾಮೆಂಟ್‌ಗಳನ್ನು ಮಾಡಿದ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು. ಕಳೆದ ಎರಡ್ಮೂರು ದಿನಗಳಿಂದ ಈ ವಿಚಾರ ವ್ಯಾಪಕ ಚರ್ಚೆಗೊಳಗಾಗಿದ್ದು, ಚಿತ್ರರಂಗದ ಖ್ಯಾತನಾಮರು ಪ್ರತಿಕ್ರಿಯೆ ನೀಡಿದ್ದಾರೆ. ಸ್ವತಃ ತ್ರಿಷಾ ಕೃಷ್ಣನ್ ಅವರೇ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ, ಲೋಕೇಶ್ ಕನಕರಾಜ್, ಖುಷ್ಬೂ, ಕಾರ್ತಿಕ್ ಸುಬ್ಬರಾಜ್ ಸೇರಿದಂತೆ ಹಲವರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
ಹಿರಿಯ ನಟ ಚಿರಂಜೀವಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಮನ್ಸೂರ್ ಅವರ ಟೀಕೆಗಳನ್ನು ಖಂಡಿಸಿ, ತ್ರಿಶಾ ಪರ ನಿಂತಿದ್ದಾರೆ. ''ನಟಿ ತ್ರಿಶಾ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಮಾಡಿರುವ ಕೆಲ ಖಂಡನೀಯ ಕಾಮೆಂಟ್‌ಗಳು ನನ್ನ ಗಮನಕ್ಕೆ ಬಂದಿವೆ. ಅವರ ಕಾಮೆಂಟ್‌ಗಳು ಅಸಹ್ಯಕರವಾಗಿದೆ. ಕಲಾವಿದರಿಗೆ ಮಾತ್ರವಲ್ಲದೇ ಯಾವುದೇ ಮಹಿಳೆ / ಹುಡುಗಿಗೆ ತೋರಿದ ಅಗೌರವ ಇದು. ನಟನ ಈ ಕಾಮೆಂಟ್‌ಗಳನ್ನು 'ಪ್ರಬಲ ಪದ'ಗಳಲ್ಲಿ ಖಂಡಿಸಬೇಕು. ತ್ರಿಶಾ ಮತ್ತು ಅಂತಹ ಭಯಾನಕ ಹೇಳಿಕೆಗಳಿಗೆ ಗುರಿಯಾಗುವ ಮಹಿಳೆಯರ ಪರ ನಾನು ನಿಲ್ಲುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.