ಟಾಲಿವುಡ್ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿಗೆ ಇಂದು ಜನ್ಮದಿನದ ಸಂಭ್ರಮ. 68ನೇ ವಸಂತಕ್ಕೆ ಕಾಲಿಟ್ಟ ಸ್ಟಾರ್ಗೆ ನಟರು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಚಿರಂಜೀವಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯಕ್ಕೂ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಚುನಾವಣಾ ಕಣದಲ್ಲಿ ಸೋಲು - ಗೆಲುವು ಕಂಡು ನಾಯಕನಾಗಿ ಹೊರಹೊಮ್ಮಿದ್ದಾರೆ.
ಮೆಗಾಸ್ಟಾರ್ 157ನೇ ಸಿನಿಮಾ: ಚಿರಂಜೀವಿ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರ 157ನೇ ಚಿತ್ರದ ಅಧಿಕೃತ ಘೋಷಣೆಯಾಗಿದೆ. ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಮಾಹಿತಿ ನೀಡಿದೆ. ಹೆಸರಿಡದ ಚಿತ್ರದ ಬಗ್ಗೆ ಮಾಹಿತಿ ನೀಡಲು ಇನ್ಸ್ಟಾ ವೇದಿಕೆ ಬಳಸಿಕೊಂಡಿದೆ. ಲಕ್ಷಾಂತರ ಅಭಿಮಾನಿಗಳ ದೇವರು ಚಿರಂಜೀವಿ ತೆಲುಗು ಚಿತ್ರ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಜೊತೆ ಕೈ ಜೋಡಿಸಿದೆ. ಇಂದು ನಟನ ಬರ್ತ್ಡೇ ಹಿನ್ನಲೆ 157 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ಮೆಗಾಸ್ಟಾರ್ಗೆ ಬರ್ತ್ಡೇ ಶುಭಾಶಯ ತಿಳಿಸಿದೆ.
ಬಿಂಬಿಸಾರ ಖ್ಯಾತಿಯ ಮಲ್ಲಿಡಿ ವಸಿಷ್ಠ ಕಥೆ ಬರೆದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಸಂಗೀತ ನೀಡಲಿದ್ದಾರೆ. ಈಗಾಗಲೇ ಭೋಲಾ ಶಂಕರ್ ಸೇರಿದಂತೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿರುವ ಚಿರಂಜೀವಿ ಅವರಿಗೆ ಈ ಸಿನಿಮಾ ಹಿಟ್ ನೀಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಪ್ರೇಕ್ಷಕರು ಕೂಡ ಮೆಗಾಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.