ಕಾಮಿಡಿ ಶೋಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಹುಬೇಡಿಕೆಯ ಹಾಸ್ಯ ನಟನಾಗಿ ಗುರುತಿಸಿಕೊಂಡವರು ಚಿಕ್ಕಣ್ಣ. ಇವರ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಉಪಾಧ್ಯಕ್ಷ'. ಈ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ 'ಉಪಾಧ್ಯಕ್ಷ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಅನಿಲ್ ಕುಮಾರ್ ನಿರ್ದೇಶನದ ಈ ಸಿನಿಮಾದ ಟೀಸರ್ ಅನ್ನು ಸ್ಯಾಂಡಲ್ವುಡ್ ನಟರಾದ ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ನಟ ಧನ್ವೀರ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ನಟಿ ಅದಿತಿ ಪ್ರಭುದೇವ, ನಿರ್ದೇಶಕರಾದ ಡಾ.ಸೂರಿ, ಮಹೇಶ್ ಕುಮಾರ್, ನಟ ಗರುಡ ರಾಮ್, ಆನಂದ್ ಆಡಿಯೋ ಶ್ಯಾಮ್ ಉಪಸ್ಥಿತರಿದ್ದರು.
ಟೀಸರ್ ಅನಾವರಣಗೊಂಡ ಬಳಿಕ ಮಾತನಾಡಿದ ನಿರ್ದೇಶಕ ಅನಿಲ್ ಕುಮಾರ್, "ಇದು ಹಳ್ಳಿಯಲ್ಲಿ ನಡೆಯುವ ಕಥೆ. ಚಿಕ್ಕಣ್ಣನ ಮ್ಯಾನರಿಸಂಗೆ ತಕ್ಕಂತೆ ಈ ಚಿತ್ರವನ್ನು ಮಾಡಲಾಗಿದೆ. ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಹಾಗೂ ಚಿಕ್ಕಣ್ಣನ ಕಾಂಬಿನೇಷನ್ ಹಿಟ್ ಆಗಿತ್ತು. ಅದೇ ರೀತಿ ಉಪಾಧ್ಯಕ್ಷ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಅಧ್ಯಕ್ಷ ಚಿತ್ರಕ್ಕೂ ಉಪಾಧ್ಯಕ್ಷ ಸಿನಿಮಾಗೂ ಒಂದು ಲಿಂಕ್ ಇದೆ" ಎಂದರು.
ಬಳಿಕ ನಟ ಚಿಕ್ಕಣ್ಣ ಮಾತನಾಡಿ, "ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಚಿತ್ರದ ನಾಯಕನಾದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದಕೂಡಲೇ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಕೂಡ ಎಲ್ಲರಿಗೂ ಇಷ್ಟ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.