ಕರ್ನಾಟಕ

karnataka

ETV Bharat / entertainment

ಹಳ್ಳಿಯಿಂದ ಆಸ್ಕರ್​ವರೆಗೆ.. 'ಚೆಲ್ಲೋ ಶೋ' ನಿರ್ದೇಶಕ ಪಾನ್ ನಳಿನ್ EXCLUSIVE ಸಂದರ್ಶನ - ಪಾನ್ ನಳಿನ್ ಸಂದರ್ಶನ

ನಿರ್ದೇಶಕ ನಳಿನ್ ಕುಮಾರ್ ಪಾಂಡ್ಯ/ಪಾನ್ ನಳಿನ್ ಅವರು ತಮ್ಮ 'ಚೆಲ್ಲೋ ಶೋ' ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿ ರಾಹುಲ್ ತ್ರಿವೇದಿ ಅವರೊಂದಿಗೆ ಮಾತನಾಡಿದ್ದಾರೆ.

Director Pan Nalin interview
ಆಸ್ಕರ್​ಗೆ ಆಯ್ಕೆಯಾದ 'ಚೆಲೋ ಶೋ'

By

Published : Oct 16, 2022, 5:18 PM IST

ಅಹಮದಾಬಾದ್ (ಗುಜರಾತ್):ಗುಜರಾತಿ ಚಲನಚಿತ್ರ 'ಚೆಲ್ಲೋ ಶೋ' ಅಥವಾ 'ದಿ ಲಾಸ್ಟ್ ಫಿಲ್ಮ್ ಶೋ' ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದೆ. ಆಸ್ಕರ್ ನಾಮಿನಿ ರೇಸ್‌ನಲ್ಲಿದ್ದ ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರಿ ಫೈಲ್ಸ್ ಚಿತ್ರಗಳನ್ನು 'ಚೆಲ್ಲೋ ಶೋ' ಹಿಂದಿಕ್ಕಿ ಆಸ್ಕರ್​ ಪ್ರಶಸ್ತಿಗೆ ಪ್ರವೇಶಿಸಿದ ಗುಜರಾತ್ ಚಲನಚಿತ್ರೋದ್ಯಮಕ್ಕೆ ಇದು ಹೆಮ್ಮೆಯ ಕ್ಷಣವಾಗಿತ್ತು.

'ಸಂಸಾರ್', 'ವ್ಯಾಲಿ ಆಫ್ ಫ್ಲವರ್ಸ್', 'ಆಂಗ್ರಿ ಇಂಡಿಯನ್ ಗಾಡೆಸೆಸ್' ನಂತಹ ಪ್ರಶಸ್ತಿ ವಿಜೇತ ಚಲನ ಚಿತ್ರಗಳನ್ನು ನಿರ್ದೇಶಿಸಿರುವ ಡೈರೆಕ್ಟರ್​ ನಳಿನ್ ಕುಮಾರ್ ಪಾಂಡ್ಯ / ಪಾನ್ ನಳಿನ್ ಅವರು ತಮ್ಮ 'ಚೆಲ್ಲೋ ಶೋ' ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿ ರಾಹುಲ್ ತ್ರಿವೇದಿ ಅವರೊಂದಿಗೆ ಮಾತನಾಡಿದ್ದಾರೆ.

ನಿರ್ದೇಶಕ ನಳಿನ್ ಕುಮಾರ್ ಪಾಂಡ್ಯ ಸಂದರ್ಶನ
  • 'ಚೆಲ್ಲೋ ಶೋ' ಕಥೆ ಏನು?

ಚೆಲ್ಲೋ ಶೋ ಚಿಕ್ಕ ಹುಡುಗನ ಕಥೆ. ಆ ಹುಡುಗ ಮೊದಲ ಬಾರಿಗೆ ಮಹಾಕಾಳಿ ಚಿತ್ರವನ್ನು ನೋಡಲು ಹೋಗುತ್ತಾನೆ. ಆ ಕ್ಷಣ ಆತನಿಗೆ ಸಖತ್​ ಕ್ರೇಜಿ ಕ್ಷಣವಾಗಿರುತ್ತದೆ. ಏಕೆಂದರೆ ಬಾಲಕ ತನ್ನ ಜೀವನದಲ್ಲಿ ಯಾವ ಚಿತ್ರವನ್ನೂ ನೋಡಿರಲಿಲ್ಲ. ಅದರ ನಂತರ ಬಾಲಕ ಶಾಲೆಯನ್ನು ಬಿಟ್ಟು ಚಲನಚಿತ್ರಗಳ ಗೀಳಿಗೆ ಅಂಟಿಕೊಳ್ಳುತ್ತಾನೆ. ಅವನು ಆರಂಭದಲ್ಲಿ ಚಲನ ಚಿತ್ರವನ್ನು ಮಾಡಲು ಬಯಸುತ್ತಾನೆ. ಆದರೆ ಅದು ಅಸಾಧ್ಯವೆಂಬುದನ್ನು ಕಂಡುಕೊಳ್ಳುತ್ತಾನೆ. ನಂತರ ಪ್ರಾಜೆಕ್ಟ್ ಆಪರೇಟರ್ ಆಗಲು ಪ್ರಯತ್ನಿಸುತ್ತಾನೆ. ಏತನ್ಮಧ್ಯೆ, ಅವನು ಪ್ರೊಜೆಕ್ಟರ್ ಆಪರೇಟರ್ ಅನ್ನು ಭೇಟಿಯಾಗುತ್ತಾನೆ. ಅವರೊಂದಿಗೆ ಸ್ನೇಹ ಬೆಳೆಸುತ್ತಾನೆ. ಸ್ನೇಹ ಗಟ್ಟಿಯಾಗುತ್ತದೆ. ಆದರೆ ಆ ಸ್ನೇಹ ದೊಡ್ಡ ಬದಲಾವಣೆ ಸೃಷ್ಟಿಸುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇದು ಚಿತ್ರದ ಕಥೆ ಎಂದು ನಳಿನ್ ಕುಮಾರ್ ಪಾಂಡ್ಯ ತಿಳಿಸಿದರು.

  • ಈ ಸಿನಿಮಾ ಮಾಡುವ ಯೋಚನೆ ಹೇಗೆ ಬಂತು? ಅದರಲ್ಲಿ ಬಾಲ ನಟ ಯಾರು?

'ಚೆಲ್ಲೋ ಶೋ' ಕಥೆ ನನ್ನ ಬಾಲ್ಯದಲ್ಲಿ ಮತ್ತು ಸ್ವತಃ ಪ್ರಾಜೆಕ್ಟ್ ಆಪರೇಟರ್ ಆಗಿದ್ದ ಇನ್ನೊಬ್ಬ ಸ್ನೇಹಿತನ ಕಥೆ. ಚೆಲ್ಲೋ ಶೋ ಸಿನಿಮಾ 2010ರಲ್ಲಿ ನಿಗದಿಯಾಯಿತು. ಭಾರತ ಮತ್ತು ಇತರ ದೇಶಗಳು 35 ಎಂಎಂ ಫಿಲ್ಮ್ ಅನ್ನು ಡಿಜಿಟಲ್ ಪ್ರೊಜೆಕ್ಷನ್‌ನೊಂದಿಗೆ ಬದಲಾಯಿಸಿದ ಸಮಯವದು, ಇದು ಒಂದು ಯುಗದ ಅಂತ್ಯವನ್ನು ಗುರುತಿಸಿತು. ಪ್ರೊಜೆಕ್ಟರ್ ಮಷಿನ್ ಮತ್ತು ಫಿಲ್ಮ್ ರೀಲ್‌ಗಳನ್ನು ನಾಶಪಡಿಸಿ ಮರುಬಳಕೆ ಮಾಡಿ ವಿಭಿನ್ನ ವಸ್ತುಗಳನ್ನು ತಯಾರಿಸುವುದನ್ನು ನೋಡುವುದು ಅವರಿಗೆ ಖಂಡಿತವಾಗಿಯೂ ಹೃದಯ ವಿದ್ರಾವಕವಾಗಿತ್ತು. ಚಿತ್ರದಲ್ಲಿ ಮಕ್ಕಳನ್ನು ಇರಿಸಿ ನಟಿಸುವಂತೆ ಮಾಡುವುದು ಬಹಳ ಮುಖ್ಯವಾಗಿತ್ತು. ಹಾಗಾಗಿ, ಈ ಚಿತ್ರಕ್ಕೆ ಸೌರಾಷ್ಟ್ರದ ಅಮ್ರೇಲಿ, ಧಾರಿ, ತಲಾಲಾ ಪ್ರದೇಶದ ಅನೇಕ ಮಕ್ಕಳು ಆಡಿಷನ್ ಕೊಟ್ಟಿದ್ದಾರೆ. ಈ ಪೈಕಿ ಆರು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಹಮದಾಬಾದ್‌ನ ಬಾಲ ನಟ ಭವಿನ್ ರಾಬರಿ ಮುಖ್ಯ ನಾಯಕರಾಗಿದ್ದಾರೆ.

  • ಗುಜರಾತಿಯನ್ನು ಹೊರತುಪಡಿಸಿ ಇತರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆಯೇ?

ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ ಆಗಿರುವ 'ಲಾಸ್ಟ್ ಫಿಲ್ಮ್ ಶೋ' ಕಳೆದ 12 ವಾರಗಳಿಂದ ಸ್ಪೇನ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಜರ್ಮನಿ ಇಸ್ರೇಲ್, ಅಮೆರಿಕ, ಜಪಾನ್, ಇಟಲಿಯಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ, ಚಿತ್ರವನ್ನು ಗುಜರಾತಿ ಭಾಷೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಹಿಂದಿಗೆ ಡಬ್ ಮಾಡಲಾಗುತ್ತಿದೆ ಮತ್ತು ಇದು ದಕ್ಷಿಣದ ಭಾಷೆಗಳಿಗೂ ಡಬ್ ಆಗಬಹುದು ಎಂದರು.

  • ಚಿತ್ರದಲ್ಲಿ ಎಷ್ಟು ಬಾಲ ನಟರು ನಟಿಸಿದ್ದಾರೆ, ಶೂಟಿಂಗ್ ವೇಳೆ ಏನಾದರು ಸಮಸ್ಯೆ ಎದುರಿಸಿದ್ದೀರಾ?

ನಟನೆಯಲ್ಲಿ ಯಾವುದೇ ಅನುಭವವಿಲ್ಲದ ಮತ್ತು ಸಣ್ಣ ಹಳ್ಳಿಗಳಿಂದ ಚಿಕ್ಕ ಮಕ್ಕಳು ಬಂದಾಗ ಸಾಮಾನ್ಯವಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಇದೊಂದು ದೊಡ್ಡ ಸವಾಲು. ಆದರೆ ನಾವು ಮಕ್ಕಳಿಗೆ ತರಬೇತಿ ನೀಡಲು ನಾಲ್ಕೈದು ತಿಂಗಳು ತೆಗೆದುಕೊಂಡಿದ್ದೇವೆ ಮತ್ತು ಅವರು ಕೂಡಾ ತುಂಬಾ ಶ್ರಮಿಸಿದ್ದಾರೆ. ಅವರಲ್ಲಿ ಸಾಕಷ್ಟು ಪ್ರತಿಭೆ ಇದೆ. ಹಾಗಾಗಿ ನಮಗೆ ಸಮಾಧಾನವಾಗಿತ್ತು. ಕೆಲವು ಡೈಲಾಗ್​ಗಳಲ್ಲಿ ಮಕ್ಕಳು ತಮ್ಮದೇ ದಾರಿಯಲ್ಲಿ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ನಟನೆಯಲ್ಲಿ ಅನುಭವ ಇಲ್ಲದವರೂ ಸಾಧನೆ ಮಾಡಬಲ್ಲರು. ಹಾಗಾಗಿ ಚಿತ್ರೀಕರಣದ ವೇಳೆ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿಸಿದರು.

  • ಗುಜರಾತ್ ಹೊರತುಪಡಿಸಿ ಬೇರೆ ಯಾವುದಾದರು ರಾಜ್ಯದಲ್ಲಿ ಚಿತ್ರೀಕರಿಸಲಾಗಿದೆಯೇ?

'ಲಾಸ್ಟ್ ಫಿಲ್ಮ್ ಶೋ' ಅನ್ನು ಹೆಚ್ಚಾಗಿ ನಾನು ಬೆಳೆದ ಸೌರಾಷ್ಟ್ರದಲ್ಲಿ ಚಿತ್ರೀಕರಿಸಲಾಗಿದೆ. ಅಮ್ರೇಲಿ, ಲಾಠಿ, ಚಲಾಲ, ಧಾರಿ, ಸಾಸಂಗೀರ್ ಗಡಿ ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ರಾಜ್‌ಕೋಟ್‌ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗಿದೆ ಎಂದರು.

  • ಬಾಲ ನಟ ರಾಹುಲ್ ಕೋಲಿ ಇತ್ತೀಚೆಗೆ ನಿಧನರಾದರು, ಅವರ ಅಭಿನಯ ಹೇಗಿತ್ತು?

ಬಾಲ ಕಲಾವಿದ ರಾಹುಲ್ ಕೋಲಿ ಈ ಚಿತ್ರದ ನಾಯಕ ನಟನ ಸ್ನೇಹಿತನಾಗಿ ಪಾತ್ರವನ್ನು ನಿರ್ವಹಿಸಿದ್ದನು. ಬಹಳ ಉತ್ತಮವಾಗಿ ನಟಿಸಿದ್ದಾನೆ ಆ ಹುಡುಗ. ಅವನು ತುಂಬಾ ಉತ್ಸಾಹದಿಂದ ಸೆಟ್‌ಗೆ ಬರುತ್ತಿದ್ದನು. ಲೈಟ್ ಮ್ಯಾನ್ ಆಗಲು ಇಷ್ಟಪಟ್ಟಿದ್ದ. ದೊಡ್ಡವನಾದ ಮೇಲೆ ಮುಂಬೈಗೆ ಕರೆದುಕೊಂಡು ಹೋಗಿ ಲೈಟ್ ಮ್ಯಾನ್ ಆಗಲು ಕಲಿಸುತ್ತೇವೆ ಎಂದು ಹೇಳಿದ್ದೆವು. ಏಕೆಂದರೆ ಅವನು ಇನ್ನೂ ಶಾಲೆಯಲ್ಲಿ ಓದುತ್ತಿದ್ದನು. ಚಿತ್ರದ ಶೂಟಿಂಗ್ ಪ್ರಾರಂಭವಾದಾಗಲೆಲ್ಲಾ ಲೈಟ್‌ಮ್ಯಾನ್‌ನೊಂದಿಗೆ ಲೈಟಿಂಗ್ ವ್ಯವಸ್ಥೆ ಮಾಡಲು ಅವನು ನಮಗೆ ಸಹಾಯ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಆ ಬಾಲಕ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ ಎಂಬುದು ತಿಳಿದು ಬಂದಿತ್ತು. ನಂತರ ಅವನ ನಿಧನ ಬಹಳ ದುಃಖ ತರಿಸಿದೆ ಎಂದು ಭಾವುಕರಾದರು.

ಇದನ್ನೂ ಓದಿ:ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.. ನೈಜ ಅಭಿನಯದ ಮೂಲಕ ಗಮನ ಸೆಳೆದಿದ್ದ ಬಾಲ ನಟ ಇನ್ನಿಲ್ಲ

ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೇಳೆ ಬಾಲಕನನ್ನು ಅಹಮದಾಬಾದ್ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಈ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಜನರು ಅವನ ಸಹಾಯಕ್ಕಾಗಿ ಆಸ್ಪತ್ರೆಗೆ ಬಂದರು. ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿಯೂ ಇದ್ದರು. ನಾವು ಅವನನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಅದು ಪ್ರಯೋಜನವಾಗಲಿಲ್ಲ. ಆತನನ್ನು ಉಳಿಸಲಾಗಲಿಲ್ಲ ಎಂದು ನಿರ್ದೇಶಕ ನಳಿನ್ ಕುಮಾರ್ ಪಾಂಡ್ಯ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details