ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಕೆಲ ಕಾಲ ನಟನಾಗಿ, ಸದ್ಯ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ವೀಸಾ ರದ್ದು ಮಾಡಿದ್ದ ಕ್ರಮಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಣೆ ಮಾಡಿ ಆದೇಶಿಸಿದೆ.
ಜೂ. 20ರವರೆಗೂ ತಡೆಯಾಜ್ಞೆ ವಿಸ್ತರಣೆ: ಚೇತನ್ ಅಹಿಂಸಾ ಅವರ ವೀಸಾ ರದ್ದುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಚೇತನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ತಡೆಯಾಜ್ಞೆಯನ್ನು ಜೂನ್ 20ರ ವರೆಗೂ ವಿಸ್ತರಣೆ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ಚೇತನ್ ಪರ ವಕೀಲರು ಹಾಜರಾಗಿ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು. ಮನವಿ ಆಲಿಸಿದ ನ್ಯಾಪೀಠ ತಡೆಯಾಜ್ಞೆ ವಿಸ್ತರಣೆ ಮಾಡಿ ಆದೇಶಿದೆ.
ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿ ಆರೋಪ: ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ಹೆಚ್. ಶಾಂತಿಭೂಷಣ್ ಹಾಗೂ ರಾಜ್ಯದ ಪರ ಹೆಚ್ಚುವರಿ ಅಡ್ವಕೇಟ್ ಜನರಲ್ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರು ಅನೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ ಮತ್ತು ಪದೇ ಪದೇ ನ್ಯಾಯಾಂಗ ನಿಂದನೆಯಾಗುವಂತಹ ಹೇಳಿಕೆ ನೀಡುವುದು ಹಾಗೂ ಸಮುದಾಯಗಳ ಮಧ್ಯೆ ದ್ವೇಷದ ನುಡಿಗಳನ್ನು ಬಿತ್ತುವ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ವಾದ ಮಂಡಿಸಿದ್ದರು.