ಬಂಟ್ವಾಳ (ದಕ್ಷಿಣ ಕನ್ನಡ) : ಕನ್ನಡಕ್ಕೆ ಕಲ್ಹಣನ ರಾಜತರಂಗಿಣಿಯನ್ನು ಅನುವಾದಿಸಿದ ಸಾಹಿತಿ ಬಂಟ್ವಾಳ ತಾಲೂಕಿನ ದಿ.ನೀರ್ಪಾಜೆ ಭೀಮ ಭಟ್ಟರ ಮಗಳ ಮಗ, ಇಂಜಿನಿಯರ್ ಪವನ್ ಭಟ್ ಇದೀಗ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಜಗತ್ತಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಅತ್ಯುತ್ತಮ 15 ಚಿತ್ರಗಳಲ್ಲಿ ಪವನ್ ಭಟ್ ಅವರು ಸಂಕಲನ ಮಾಡಿದ ಗುಜರಾತಿ ಚಿತ್ರ ಚೆಲ್ಲೊ ಶೋ ಆಯ್ಕೆಯಾಗಿದೆ.
ಲಗಾನ್ ಬಳಿಕ ಆಯ್ಕೆಯಾದ ಮೊದಲ ಭಾರತೀಯ ಸಿನಿಮಾ ಇದು. ಪವನ್ ಭಟ್ ಮತ್ತು ನ್ಯೂಜಿಲೆಂಡ್ನಲ್ಲಿರುವ ಶ್ರೇಯಸ್ ಈ ಚಿತ್ರದ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಗೋಪಾಲಕೃಷ್ಣ ಭಟ್ ಮತ್ತು ಸರೋಜಾ ಜಿ. ಭಟ್ ದಂಪತಿಯ ಏಕೈಕ ಪುತ್ರ ಪವನ್ ಭಟ್ ಈವರೆಗೆ ಒಟ್ಟು 22 ಸಿನಿಮಾಗಳನ್ನು ಎಡಿಟ್ ಮಾಡಿದ್ದಾರೆ.
ಟಾಪ್ 15 ಚಿತ್ರಗಳ ಪಟ್ಟಿ:ಸೆಪ್ಟೆಂಬರ್‌ನಲ್ಲಿ ಪ್ರಥಮ ಸುತ್ತಿನಲ್ಲಿ 92 ದೇಶಗಳ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದ್ದವು. ಬೆಸ್ಟ್ ಇಂಟರ್‌ನ್ಯಾಶನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ 92 ಚಿತ್ರಗಳನ್ನು ವಿಶ್ಲೇಷಿಸಿದ ಅಕಾಡೆಮಿಯು ಲಾಸ್ಟ್ ಫಿಲ್ಮ್ ಶೋ (ಚೆಲ್ಲೋ ಶೋ) ಅನ್ನು ಟಾಪ್ 15ರ ಪಟ್ಟಿಯಲ್ಲಿ ಆಯ್ಕೆ ಮಾಡಿದೆ. ಮದರ್ ಇಂಡಿಯಾ, ಸಲಾಮ್ ಬಾಂಬೆ ಮತ್ತು ಲಗಾನ್ ಚಿತ್ರಗಳು ಆಸ್ಕರ್ ಪ್ರಶಸ್ತಿ ಭಾಜನವಾಗಿದ್ದು, ಇದೀಗ ಚೆಲ್ಲೋ ಶೋ ಕೂಡಾ ಆ ಹಾದಿಯಲ್ಲಿದೆ. 5 ಚಿತ್ರಗಳ ಪಟ್ಟಿಯು 2023ರ ಜನವರಿ 24ರಂದು ಹೊರಬೀಳಲಿದೆ. 2023ರ ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಚೆಲ್ಲೋ ಶೋ ಬಗ್ಗೆ ಒಂದಿಷ್ಟು ಮಾಹಿತಿ:ಗುಜರಾತಿ ಚಲನಚಿತ್ರ ಚೆಲ್ಲೋ ಶೋ ಅಥವಾ ದಿ ಲಾಸ್ಟ್ ಫಿಲ್ಮ್ ಶೋ ''ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗ''ದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದೆ. ಸಂಸಾರ್, ವ್ಯಾಲಿ ಆಫ್ ಫ್ಲವರ್ಸ್, ಆಂಗ್ರಿ ಇಂಡಿಯನ್ ಗಾಡೆಸೆಸ್ ನಂತಹ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ನಿರ್ದೇಶಿಸಿರುವ ಡೈರೆಕ್ಟರ್ ನಳಿನ್ ಕುಮಾರ್ ಪಾಂಡ್ಯ / ಪಾನ್ ನಳಿನ್ ಅವರು ಈ ಚೆಲ್ಲೋ ಶೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.