ಸಿನಿಮಾದ ಶೀರ್ಷಿಕೆಯೇ ಪ್ರೇಕ್ಷಕರಿಗೆ ಮೊದಲ ಆಮಂತ್ರಣ ಅನ್ನೋದು ಸಿನಿಮಂದಿಯ ಮಾತು. ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ಚಿತ್ರ ನಿರ್ಮಾಪಕರದ್ದು. ಇತ್ತೀಚಿನ ದಿನಗಳಲ್ಲಿ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಅನೇಕ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇದೀಗ ಅಂಥಹದ್ದೇ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿದೆ 'ಚಟ್ಟ' ಸಿನಿಮಾ.
'ಚಟ್ಟ'. ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗುತ್ತಿದ್ದಾರೆ ನಿರ್ದೇಶಕ ಭಾನು ಪ್ರಕಾಶ್. ಕೋ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. 'ಕೇರ್ ಆಫ್ ಫುಟ್ಬಾತ್' ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ನಿರ್ದೇಶನವನ್ನು ಕಲಿತುಕೊಂಡಿರುವ ಭಾನು ಪ್ರಕಾಶ್ ಚಟ್ಟ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಟೈಟಲ್ ರಿವೀಲ್ ಈವೆಂಟ್: ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಕವಿರತ್ನ ವಿ. ನಾಗೇಂದ್ರ ಪ್ರಸಾದ್, ನಿರ್ದೇಶಕ ಜೋಸೈಮನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಭಾನು ಪ್ರಕಾಶ್ ಅವರ ಹೊಸ ಕನಸಿಗೆ ಜೊತೆಯಾದರು.
ಈ ವೇಳೆ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, ಚಟ್ಟ ಎಂದರೆ ನಾವು ಅಂದುಕೊಂಡಂತೆ ಮೃತದೇಹ ಎತ್ತಿಕೊಂಡು ಹೋಗುವುದಲ್ಲ. ಲೋಕದಲ್ಲಿನ ಪುಸ್ತಕ. ಆ ಪುಸ್ತಕದ ಕೊನೆಯ ಪೇಜ್ ಸಿನಿಮಾ. ನನಗೆ ಆಶೀರ್ವದಿಸಲು ಬಂದವರಿಗೆ ಧನ್ಯವಾದ. ಕಲಾವಿದರು ಸೇರಿದಂತೆ ಚಿತ್ರತಂಡದವರನ್ನು ಒಬ್ಬೊಬ್ಬರಾಗೇ ಪರಿಚಯಿಸುತ್ತೇವೆ. ಚಟ್ಟ ಒಂದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ತ್ರಿಶಾ ಬಗ್ಗೆ ಕಾಮೆಂಟ್: ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೊರೆ ಹೋದ ಮನ್ಸೂರ್ ಅಲಿ ಖಾನ್
ಕೆ.ಎಂ ಕ್ರಿಯೇಷನ್ಸ್ ನಿರ್ಮಾಣದ ಚಟ್ಟ ಸಿನಿಮಾವನ್ನು ಕುಮಾರ್ ಎಂ, ಅಣಜಿ ರಮೇಶ್, ಡಿ. ಒಬಲ್ ರೆಡ್ಡಿ, ಕುಮಾರ್ ಎಂ ನಿರ್ಮಾಣ ಮಾಡುತ್ತಿದ್ದಾರೆ. ಕೆ ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಕೋ ಪ್ರೊಡ್ಯೂಸರ್ ಆಗಿ ಚಿತ್ರತಂಡದ ಭಾಗವಾಗಿದ್ದಾರೆ. ಮುರಳಿ ಕೃಷ್ಣ, ಸಿ. ಹೆಚ್ ಉತನೂರಪ್ಪ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಿಸ್ಟ್ರೀ ಡ್ರಾಮಾ ಕಥಾಹಂದರ ಹೊಂದಿರುವ ಚಟ್ಟ ಸಿನಿಮಾದ ಶೂಟಿಂಗ್ 2024ರ ಫೆಬ್ರವರಿಯಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ತಾರಾಬಗಳ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ರಿವೀಲ್ ಮಾಡಲಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳು ಮೂಡಿಬರುತ್ತಿವೆ. ವಿಭಿನ್ನ ಶೀರ್ಷಿಕೆಯ 'ಚಟ್ಟ' ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ವಿಷ್ಣು ಮಂಚು ಬರ್ತ್ಡೇ ಗಿಫ್ಟ್: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ 'ಕಣ್ಣಪ್ಪ' ಪೋಸ್ಟರ್