ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಒಂದಲ್ಲ ಒಂದು ವಿಚಾರವಾಗಿ ಟಾಕ್ ಆಗುತ್ತಿರುವ ಚಿತ್ರ ಎಂದರೆ ಅದು 'ಸೂತ್ರಧಾರಿ'. ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಈಗಾಗಲೇ ಈ ಚಿತ್ರದ ಡ್ಯಾಶ್ ಸಾಂಗ್ ಬಿಡುಗಡೆಯಾಗಿದ್ದು, ಹದಿನೇಳು ಮಿಲಿಯನ್ ವೀಕ್ಷಣೆಯಾಗುವ ಮೂಲಕ ರಾಜ್ಯದ ಜನರ ಮನ ಗೆದ್ದಿದೆ. ಇದೀಗ 'ಸೂತ್ರಧಾರಿ' ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ 'ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು' ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ. 'ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು' ಈ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಈ ವೇಳೆ, ಮೊದಲು ಮಾತು ಶುರು ಮಾಡಿದ ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, "ಸೂತ್ರಧಾರಿ ಸಿನಿಮಾದ 'ಡ್ಯಾಶ್' ಹಾಡು ಭರ್ಜರಿ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನಗಿತ್ತು. ಇದೀಗ ವಿಜಯ್ ಈಶ್ವರ್ ಬರೆದಿರುವ 'ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು' ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡು ಕೂಡ ನೋಡುಗರ, ಕೇಳುಗರ ಮನ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.