ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಚಂದನ್ ಶೆಟ್ಟಿ ಅಭಿನಯಕ್ಕೂ ಸೈ ಅಂದಿದ್ದಾರೆ. ಹೌದು, ಸೂಪರ್ ಹಿಟ್ ರ‍್ಯಾಪ್ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಚಂದನ್ ಶೆಟ್ಟಿ 'ಎಲ್ರ ಕಾಲೆಳೆಯುತ್ತೆ ಕಾಲ' ಚಿತ್ರದ ಮೂಲಕ ಹೀರೋ ಆಗುತ್ತಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
'ಎಲ್ರ ಕಾಲೆಳೆಯತ್ತೆ ಕಾಲ' ಈ ಡೈಲಾಗ್ ಕೇಳ್ತಿದ್ರೆ ರಿಯಲ್ ಸ್ಟಾರ್ ಉಪೇಂದ್ರ ನೆನಪಾಗ್ತಾರೆ. ಉಪೇಂದ್ರ ತಮ್ಮ ಉಪ್ಪಿ 2 ಸಿನಿಮಾದಲ್ಲಿ ಎಲ್ಲರ ಕಾಲೆಳೆಯತ್ತೆ ಕಾಲ ಎಂಬ ಹಾಡಿನ ಮೂಲಕ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದರು. ಈಗ ಇದೇ ಹಾಡಿನ ಸಾಲು ಸಿನಿಮಾ ಟೈಟಲ್ ಆಗಿದೆ. ಇದೇ ಟೈಟಲ್ ಇಟ್ಟುಕೊಂಡು ನಟ ಹಾಗೂ ನಿರ್ದೇಶಕ ಸುಜಯ್ ಶಾಸ್ತ್ರಿ ಸಿನಿಮಾ ಮಾಡಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಪ್ರಮೋಷನಲ್ ಹಾಡೊಂದನ್ನು ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನಟ ಚಂದನ್ ಶೆಟ್ಟಿ, ನಾಯಕಿ ಅರ್ಚನಾ ಕೊಟ್ಟಿಗೆ, ಪ್ರಮೋಷನಲ್ ಹಾಡಿನಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರುವ ರಾಗಿಣಿ ದ್ವಿವೇದಿ, ನಿರ್ಮಾಪಕರಾದ ಉಷಾ ಗೋವಿಂದರಾಜು ಉಪಸ್ಥಿತರಿದ್ದರು.
ಟುನ್ ಟುನ್ ಅಂತಲೇ ಶುರುವಾಗುವ ಹಾಡಿನಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ. ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಗಾಯಕಿ ಮಂಗ್ಲಿ ಜೊತೆ ಹಾಡಿದ್ದಾರೆ. ಅಷ್ಟೇ ಅಲ್ಲ ಕಾಲೇಜ್ ಟೈಮ್ ಕ್ರಷ್ ಹೀರೋಯಿನ್ ರಾಗಿಣಿ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.
ಈ ಹಾಡು ಹಾಗೂ ಪಾತ್ರದ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ಈ ಪಾತ್ರಕ್ಕಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡು ಅಭಿನಯಿಸಿದ್ದೇನೆ. ಇನ್ನು ನಾನು ಕಾಲೇಜು ಟೈಂ ಅಲ್ಲಿ ಕೆಂಪೇಗೌಡ ಸಿನಿಮಾದ 'ಥರಾ ಥರಾ' ಹಾಡು ನೋಡಿ ರಾಗಿಣಿ ಅವರ ಮೇಲೆ ಕ್ರಷ್ ಆಗಿತ್ತು. ಇವತ್ತು ನನ್ನ ಇಷ್ಟದ ಹೀರೋಯಿನ್ ಜೊತೆ ಅಭಿನಯಿಸಿ ಡ್ಯಾನ್ಸ್ ಮಾಡಿದ್ದೇನೆ ಅಂದರೆ ಅದು ನನ್ನ ಅದೃಷ್ಟ ಅಂತಾ ಚಂದನ್ ಶೆಟ್ಟಿ ಕಾಲೇಜು ಕ್ರಷ್ ಬಗ್ಗೆ ಹಂಚಿಕೊಂಡರು.
'ಎಲ್ಲರ ಕಾಲೆಳೆಯುತ್ತೆ ಕಾಲ' ಇದೊಂದು 80ರ ದಶಕದ ಕಥೆ. ಒಂದು ಘಟನೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೆಲ್ಲ ಅವಾಂತರಕ್ಕೆ ದಾರಿ ಮಾಡಿಕೊಡುತ್ತೆ ಎಂಬುದನ್ನು ನಿರ್ದೇಶಕ ಸುಜಯ್ ಶಾಸ್ರ್ತಿ ಹೇಳುವ ಪ್ರಯತ್ನ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಅಭಿನಯದ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ. ಪ್ರವೀಣ್ ಪ್ರದೀಪ್ ಸಂಗೀತ ನೀಡಿದ್ದಾರೆ.