ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಟಾಕ್ ಆಗುತ್ತಿರುವ ಸಿನಿಮಾ ಕಾಂತಾರ. ಕಾಂತಾರ ಎಲ್ಲರನ್ನೂ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದ್ದು, ಪರಭಾಷೆಗಳಿಗೂ ಡಬ್ಬಿಂಗ್ ಮಾಡಲಾಗಿದೆ. ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ 'ಕಾಂತಾರ' ಹಿಂದಿ ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಈ ಮಧ್ಯೆ, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಹೊಂಬಾಳೆ ಫಿಲ್ಮ್ಸ್ ತಂಡದವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವರು, ಹೊಂಬಾಳೆ ಫಿಲ್ಮ್ಸ್ ತಂಡದವರನ್ನು ಭೇಟಿ ಮಾಡಿ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದೇನೆ. ಭಾರತವನ್ನು ಜಗತ್ತಿನ ಸಿನಿಮಾ ಹಬ್ ಮಾಡುವ ಯೋಜನೆಗಳನ್ನು ಕೇಳಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಸಚಿವರೊಂದಿಗೆ ಸಭೆಯ ನಂತರ ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಬಹಳ ಅದ್ಭುತವಾದ ಮೀಟಿಂಗ್ ಭಾಗವಹಿಸುವ ಅವಕಾಶ ಸಿಕ್ಕಿತು. ನಮ್ಮ ಸಂಸ್ಖತಿಯನ್ನು ಸಿನಿಮಾಗಳ ಮೂಲಕ ಸಾರುವ ಮತ್ತು ಭಾರತವನ್ನು ವಿಶ್ವದ ಸಿನಿಮಾ ಹಬ್ ಮಾಡುವ ವಿಷಯಗಳೂ ಸೇರಿದಂತೆ ಸಾಕಷ್ಟು ವಿಷಯಗಳನ್ನು ಅವರೊಂದಿಗೆ ಚರ್ಚಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಅವರೊಂದಿಗೆ ಚೆಲುವೇ ಗೌಡ ಹಾಗೂ ಕಾರ್ತಿಕ್ ಗೌಡ ಸಹ ಹಾಜರಿದ್ದರು.