ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆ ಶಾಸ್ತ್ರಗಳು ಸಂಪೂರ್ಣವಾಗುವವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಮಾತನಾಡಿರದ ಈ ನವದಂಪತಿ ನಿನ್ನೆ ಸಂಜೆ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಧು ವರ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನವದಂಪತಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಸೆಲೆಬ್ರಿಟಿಗಳು ಸಹ ವಿಶೇಷವಾಗಿ ಶುಭ ಕೋರಿದ್ದಾರೆ.
ಶಂಕರ್ ಅವರ ಮುಂಬರುವ ಚಿತ್ರದಲ್ಲಿ ಕಿಯಾರಾ ಜೊತೆ ತೆರೆ ಹಂಚಿಕೊಳ್ಳಲಿರುವ ಆರ್ಆರ್ಆರ್ ನಟ ರಾಮ್ ಚರಣ್, "ಮ್ಯಾಚ್ ಮೇಡ್ ಇನ್ ಹೆವೆನ್, ಅಭಿನಂದನೆಗಳು" ಎಂದು ಬರೆದಿದ್ದಾರೆ. ಬಾಲಿವುಡ್ ತಾರಾ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಅಭಿನಂದನೆ ತಿಳಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ದೊಡ್ಡ ಬರಹದ ಮೂಲಕ ನವದಂಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. "ನಾನು ಅವರನ್ನು (ಸಿದ್ಧಾರ್ಥ್) ಒಂದೂವರೆ ದಶಕದ ಹಿಂದೆ ಭೇಟಿಯಾಗಿದ್ದೆ. ಮೌನಿ, ಬಲಶಾಲಿ, ಸೂಕ್ಷ್ಮ ಸ್ವಭಾವ ಎನಿಸಿತ್ತು. ಹಲವು ವರ್ಷಗಳ ನಂತರ ಕಿಯಾರಾ ಅವರನ್ನು ಭೇಟಿಯಾದೆ. ಅವರೂ ಕೂಡ ಮೌನಿ, ಬಲಶಾಲಿ ಮತ್ತು ಬಹಳ ಸಂವೇದನಾಶೀಲರು. ನಂತರ ಅವರು ಒಬ್ಬರನ್ನೊಬ್ಬರು ಭೇಟಿಯಾದರು. ಶಕ್ತಿ ಮತ್ತು ಘನತೆಯ ಈ ಎರಡು ಸ್ತಂಭಗಳು ಉತ್ತಮ ಬಂಧನವನ್ನು ಉಂಟುಮಾಡಬಹುದು, ಸುಂದರ ಪ್ರೇಮಕಥೆಯನ್ನು ರಚಿಸಬಹುದು ಎಂದು ನಾನು ಆ ಕ್ಷಣದಲ್ಲಿ ಅರಿತುಕೊಂಡೆ. ಪ್ರೀತಿಯ ಮಂಟಪದಲ್ಲಿ ಒಬ್ಬರನ್ನೊಬ್ಬರ ಕೈ ಹಿಡಿಯುವ ವೇಳೆ ಸುತ್ತಲಿದ್ದವರೆಲ್ಲ ಒಂದು ಅದ್ಭುತ ಶಕ್ತಿಯನ್ನು ಅನುಭವಿಸಿದರು. ಐ ಲವ್ ಯೂ ಸಿದ್, ಐ ಲವ್ ಯೂ ಕಿ ಎಂದು ಬರೆದುಕೊಂಡಿದ್ದಾರೆ.