ಇತ್ತೀಚಿನ ಸಂದರ್ಶನವೊಂದರಲ್ಲಿ ಸೌತ್ ಸಿನಿಮಾ ರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ನಟ ಮನ್ಸೂರ್ ಅಲಿ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಖ್ಯಾತನಾಮರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ, ನಟಿ ಖುಷ್ಬು ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತ್ರಿಶಾ ಕೃಷ್ಣನ್ ಅಸಮಧಾನ: ನಟಿ ತ್ರಿಶಾ ಕೃಷ್ಣನ್ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಗಳಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ನನ್ನ ಬಗ್ಗೆ ಮನ್ಸೂರ್ ಅಲಿ ಖಾನ್ ನೀಡಿದ ಅಗೌರವದ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಕಾಮೆಂಟ್ಗಳು ಲೈಂಗಿಕವಾಗಿ, ಅಗೌರವವಾಗಿರುವುದಲ್ಲದೇ ಅತ್ಯಂತ ಕಳಪೆಯಾಗಿದೆ. ಅಂತಹ ನಡವಳಿಕೆಯುಳ್ಳವರೊಂದಿಗೆ ಕೆಲಸ ಮಾಡುವ ಉದ್ದೇಶವಿಲ್ಲ. ಮುಂದಿನ ಯಾವುದೇ ಸಿನಿಮಾಗಳಲ್ಲಿ ಅವರೊಂದಿಗೆ ನಟಿಸುವುದಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.
ಮನ್ಸೂರ್ ಹೇಳಿದ್ದೇನು? ವರದಿಗಳ ಪ್ರಕಾರ, ಸಂದರ್ಶನವೊಂದರಲ್ಲಿ ನಟ ಮನ್ಸೂರ್ ಅಲಿ ಖಾನ್ ಅವರು ನಟಿ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಚಿತ್ರದಲ್ಲಿ ತ್ರಿಷಾ ಅವರೊಂದಿಗೆ ಆತ್ಮೀಯ ದೃಶ್ಯಗಳಿಲ್ಲದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ಇತರೆ ನಟಿಯರೊಂದಿಗಿನ ಆತ್ಮೀಯ ದೃಶ್ಯಗಳ (intimate scenes) ಬಗ್ಗೆ ಉಲ್ಲೇಖಿಸಿ, ತ್ರಿಷಾ ಜೊತೆ ಅಂತಹ ದೃಶ್ಯವಿರಲಿಲ್ಲ ಎಂದು ತಮ್ಮ ನಿರಾಶೆ ವ್ಯಕ್ತಪಡಿಸಿದ್ದರು.
ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್:ತಮಿಳು ಚಲನಚಿತ್ರೋದ್ಯಮದಲ್ಲಿ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವುದರ ಬಗ್ಗೆ ಧ್ವನಿಯೆತ್ತುವ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಮನ್ಸೂರ್ ಅಲಿ ಖಾನ್ ನಡವಳಿಕೆಯನ್ನು ಖಂಡಿಸಿದ್ದಾರೆ. ಪ್ರಭಾವಿ ಪುರುಷರ ಇಂತಹ ವರ್ತನೆಗಳು ಏಕೆ ಪ್ರಶ್ನಿಸಲ್ಪಡುವುದಿಲ್ಲ ಎಂದು ಕೇಳಿದ್ದಾರೆ. ಮನ್ಸೂರ್ ಅವರ ಈ ಹಿಂದಿನ ಘಟನೆಗಳನ್ನು ಹಂಚಿಕೊಂಡು, ಈ ಉದ್ಯಮದಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ ಎಂದು ಕಿಡಿಕಾರಿದ್ದಾರೆ.