ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದು, ಅಂತ್ಯಸಂಸ್ಕಾರ ಗುಜರಾತ್‌ನ ಅಹಮದಾಬಾದ್ನಲ್ಲಿ ನೆರವೇರಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಕಂಗನಾ, ಅಜಯ್ ದೇವಗನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇವರು ದುಃಖ ಭರಿಸುವ ಶಕ್ತಿ ನೀಡಲಿ- ಅಕ್ಷಯ್ ಕುಮಾರ್: 'ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಪ್ರಧಾನಿಯವರೇ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕಂಗನಾ ಸಂತಾಪ: ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀರಾಬೆನ್ ಅವರು ಮೋದಿ ಅವರಿಗೆ ತಮ್ಮ ಕೈಯಿಂದ ಊಟ ಮಾಡಿಸುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ. 'ದೇವರು ನರೇಂದ್ರ ಮೋದಿಯವರಿಗೆ ಈ ಕಠಿಣ ಸಮಯದಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ನೀಡಲಿ' ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ಸರಳ, ತತ್ವ ಸಿದ್ಧಾಂತವುಳ್ಳ ಮಹಿಳೆ- ಅಜಯ್ ದೇವಗನ್: ಸರಳ, ತತ್ವ ಸಿದ್ಧಾಂತವುಳ್ಳ ಮಹಿಳೆ ನರೇಂದ್ರ ಮೋದಿ ಎಂಬ ಉತ್ತಮ ಮಗನನ್ನು ಬೆಳೆಸಿದ್ದಾರೆ. ನಮ್ಮ ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ನನ್ನ ವೈಯಕ್ತಿಕ ಸಂತಾಪಗಳು ಎಂದು ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.
ದೇಶದ ಪ್ರತೀ ತಾಯಿಯ ಆಶೀರ್ವಾದ ನಿಮ್ಮೊಂದಿಗಿದೆ- ಅನುಪಮ್ ಖೇರ್: 'ನಿಮ್ಮ ಮಾತಾಶ್ರೀ ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ಕೇಳಿ ದುಃಖಿತನಾಗಿದ್ದೇನೆ ಮತ್ತು ಭಾವುಕನಾಗಿದ್ದೇನೆ. ಅವರ ಮೇಲಿನ ನಿಮ್ಮ ಪ್ರೀತಿ ಮತ್ತು ಗೌರವವು ಪ್ರಪಂಚದಲ್ಲಿ ಎದ್ದು ಕಾಣುತ್ತದೆ. ನಿಮ್ಮ ಜೀವನದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನೀವು ಭಾರತಮಾತೆಯ ಮಗ. ದೇಶದ ಪ್ರತೀ ತಾಯಿಯ ಆಶೀರ್ವಾದ ನಿಮ್ಮೊಂದಿಗಿದೆ. ನನ್ನ ತಾಯಿಯದ್ದೂ ಸಹ' ಎಂದು ನಟ ಅನುಪಮ್ ಖೇರ್ ತಿಳಿಸಿದ್ದಾರೆ.