ಭೀಕರ ರೈಲು ಅಪಘಾತಕ್ಕೆ ಭಾರತ ಸಾಕ್ಷಿಯಾಗುತ್ತಿದ್ದಂತೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಜನರು ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಜನಪ್ರಿಯ ಸೆಲೆಬ್ರಿಟಿಗಳಾದ ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಮತ್ತು ಕಿರಣ್ ಖೇರ್ ಕೂಡ ಒಡಿಶಾ ರೈಲು ದುರಂತದಲ್ಲಿ ಸಾವನಪ್ಪಿದವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಭೀಕರ ಘಟನೆಯ ಕುರಿತು ಪ್ರತಿಕ್ರಿಯಿಸಿದ ಚಿರಂಜೀವಿ, "ಒಡಿಶಾದಲ್ಲಿ ಸಂಭವಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತ ಮತ್ತು ಅಪಾರ ಜೀವಹಾನಿ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಹೃದಯವು ದುಃಖಿತ ಕುಟುಂಬಗಳ ಹತ್ತಿರ ಹೋಗಿದೆ. ಜೀವ ಉಳಿಸಲು ರಕ್ತದ ಘಟಕಗಳಿಗೆ ತುರ್ತು ಬೇಡಿಕೆಯಿದೆ ಎಂಬ ವಿಚಾರವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಮ್ಮ ಎಲ್ಲಾ ಅಭಿಮಾನಿಗಳಿಗೆ ಮತ್ತು ಘಟನೆಯ ಹತ್ತಿರದ ಪ್ರದೇಶಗಳಲ್ಲಿರುವ ಜನರಿಗೆ ನನ್ನದೊಂದು ಮನವಿ, ಜೀವ ಉಳಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಿ'' ಎಂದು ಕೇಳಿಕೊಂಡಿದ್ದಾರೆ.
ಯಶ್ ಟ್ವೀಟ್: 'ಒಡಿಶಾದ ರೈಲು ದುರಂತ ಎಷ್ಟು ಹೃದಯ ವಿದ್ರಾವಕವಾಗಿದೆ ಎಂಬುದನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಗಳು' ಎಂದು ಟ್ವೀಟ್ ಮಾಡಿದ್ದಾರೆ.
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ ತೀವ್ರ ದುಃಖವಾಗಿದೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಅವರು ಶಕ್ತಿ ಕಂಡುಕೊಳ್ಳಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ನಟ ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯಿಸಿ, "ಭೀಕರ ರೈಲು ಅಪಘಾತದಿಂದ ಸಂತ್ರಸ್ತರಾದ ಕುಟುಂಬಗಳು ಮತ್ತು ಅವರ ಪ್ರೀತಿಪಾತ್ರರಿಗೆ ಸಂತಾಪಗಳು. ಈ ವಿನಾಶಕಾರಿ ಘಟನೆಯಿಂದ ಪೀಡಿತ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನನ್ನ ಆಲೋಚನೆಗಳು ಇವೆ. ಈ ಕಷ್ಟದ ಸಮಯದಲ್ಲಿ ಶಕ್ತಿ ಮತ್ತು ಬೆಂಬಲ ಅವರನ್ನು ಸುತ್ತುವರಿಯಲಿ" ಎಂದು ಬರೆದಿದ್ದಾರೆ.
ನಟಿ, ರಾಜಕಾರಣಿ ಕಿರಣ್ ಖೇರ್ ಟ್ವೀಟ್ ಮಾಡಿದ್ದು, "ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಕೇಳಿ ದುಃಖವಾಯಿತು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದ್ದು, ಒಡಿಶಾ ಸರ್ಕಾರ ಇಂದು ಶೋಕಾಚರಣೆ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.