ಹೈದರಾಬಾದ್, ತೆಲಂಗಾಣ:ಮೆಗಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮೂರನೇ ತಲೆಮಾರಿನ ಕುಡಿ ಎಂಟ್ರಿ ಕೊಟ್ಟಿದೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಂದೆ-ತಾಯಿ ಆಗಿದ್ದಾರೆ. ಮಂಗಳವಾರ ಮುಂಜಾನೆ ಜುಬಿಲಿ ಹಿಲ್ಸ್ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಹೇಳಿಕೆ ನೀಡಿದೆ.
2012ರಲ್ಲಿ ಚರಣ್-ಉಪಾಸನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಎರಡೂ ಕುಟುಂಬಗಳು ಕಳೆದ ವರ್ಷ ಡಿಸೆಂಬರ್ 12 ರಂದು ತಾವು ಪೋಷಕರಾಗುವುದಾಗಿ ಘೋಷಿಸಿದ್ದವು. ಕೆಲ ದಿನಗಳ ಹಿಂದೆ ಉಪಾಸನಾ ಸೀಮಂತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು.
ಸಾಮಾನ್ಯವಾಗಿ ಮಗುವಿನ ಜನನದ ನಂತರ ದಂಪತಿಗಳು ಬೇರೆಯಾಗುತ್ತಾರಂತೆ. ಆದರೆ ಅದಕ್ಕೆ ಸಂಪೂರ್ಣವಾಗಿ ಭಿನ್ನವಾಗಿರುತ್ತೇವೆ ಎಂದು ಉಪಾಸನಾ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಪ್ರಸ್ತುತ ನಾನು ಮತ್ತು ಚರಣ್ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗುವಿನ ಜನನದ ನಂತರ ಅತ್ತೆ ಸುರೇಖಾ ಜೊತೆ ಇರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದರು. ತಮ್ಮ ಬೆಳವಣಿಗೆಯಲ್ಲಿ ತಮ್ಮ ಅಜ್ಜಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಜ್ಜ ಅಜ್ಜಿಯರೊಂದಿಗೆ ಇರುವ ಸಂತೋಷವನ್ನು ತಮ್ಮ ಮಗುವಿನಿಂದ ಕಸಿದುಕೊಳ್ಳಲು ನಾವು ಬಯಸುವುದಿಲ್ಲ ಎಂದು ಅವರು ಹೇಳಿದ್ದರು.
ಓದಿ:ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತ: ದುಬೈನ ಸಮುದ್ರತೀರದಲ್ಲಿ ಅದ್ಧೂರಿ ಸಮಾರಂಭ
ಸೌತ್ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇದಕ್ಕಾಗಿ ಕುಟುಂಬಸ್ಥರು ಕಾತರದಿಂದ ಕಾಯುತ್ತಿದ್ದರು. ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವಾಗಲೇ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿತ್ತು. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿತ್ತು.
ಉಪಾಸನಾ ಈ ತೊಟ್ಟಿಲಿನ ಮಹತ್ವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಲೈಂಗಿಕ ಕಳ್ಳಸಾಗಣೆ ಕೂಪದಿಂದ ಹೊರಬಂದ ಮಹಿಳೆಯರಿಗೆ ಆಶ್ರಯ ನೀಡುವ ಪ್ರಜ್ವಲ ಫೌಂಡೇಶನ್ ಈ ತೊಟ್ಟಿಲನ್ನು ತಮಗೆ ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದರು. ಅಲ್ಲಿರುವ ಕೆಲವು ಮಹಿಳೆಯರೇ ಈ ಸುಂದರ ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ. ಅವರು ತಯಾರಿಸಿದ ಈ ತೊಟ್ಟಿಲಿಗೆ ಹೆಚ್ಚಿನ ಮಹತ್ವ ಇದೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿಕೊಂಡಿದ್ದರು.
"ಅತೀ ಶೀಘ್ರದಲ್ಲೇ ನಾವು ಮೂವರಾಗುತ್ತಿದ್ದೇವೆ. ನನ್ನ ಮಗುವಿಗೆ ನಿಮ್ಮ ಕೈಯಿಂದ ನೀಡಿದ ತೊಟ್ಟಿಲು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಧೈರ್ಯ, ಶಕ್ತಿ, ಸ್ವಾಭಿಮಾನ ಮತ್ತು ಭರವಸೆಯ ಸಂಕೇತವಾಗಿ ನನ್ನ ಮಗುವಿನ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಸುಂದರ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಪ್ರಜ್ವಲ ಫೌಂಡೇಶನ್‌ಗೆ ವಿಶೇಷ ಧನ್ಯವಾದಗಳು" ಎಂದು ತೊಟ್ಟಿಲಿನ ಫೋಟೋ ಹಂಚಿಕೊಂಡ ಉಪಾಸನಾ ಕ್ಯಾಪ್ಶನ್ ಬರೆದಿದ್ದರು.
ಓದಿ:ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಧಾರಣೆ: ಕಾರಣ ಬಹಿರಂಗಪಡಿಸಿದ ರಾಮ್ ಚರಣ್ ಪತ್ನಿ