ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಎಂದೂ ಮರೆಯದ ಕ್ಲಾಸಿಕ್ ಸಿನಿಮಾ ಅಂದರೆ ಅದು ನಾಗರಹಾವು ಸಿನಿಮಾ. ಡಾ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಂತಹ ದಿಗ್ಗಜ ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ. ಕನ್ನಡ ಸಿನಿಮಾರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಮಾಸ್ಟರ್‌ಪೀಸ್ ಚಿತ್ರ 1972ರ ಡಿಸೆಂಬರ್ 29ರಂದು ನಾಗರಹಾವು ಸಿನಿಮಾ ತೆರೆಗೆ ಬಂದಿತ್ತು. ಇಂದಿಗೆ ಆ ಸಿನಿಮಾ ತೆರೆಕಂಡು ಭರ್ತಿ 50 ವರ್ಷಗಳಾಗಿವೆ.
ತ.ರಾ ಸುಬ್ಬರಾಯರ 3 ಕಾದಂಬರಿಗಳು ಕಥೆ, ಪುಟ್ಟಣ್ಣ ಕಣಗಾಲ್ ದಕ್ಷ ನಿರ್ದೇಶನ ಹಾಗೂ ವಿಜಯ ಭಾಸ್ಕರ್ ಸಂಗೀತ ಚಿತ್ರದ ಜೀವಾಳವಾಗಿತ್ತು. ವಂಶವೃಕ್ಷ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಪದಾರ್ಪಣೆ ಮಾಡಿದರು. ವಿಷ್ಣುವರ್ಧನ್ ಮೂಲ ಹೆಸರು ಸಂಪತ್ ಕುಮಾರ್. ಆದರೆ, ನಾಗರಹಾವು ಚಿತ್ರಕ್ಕಾಗಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಹೆಸರು ಬದಲು ವಿಷ್ಣುವರ್ಧನ್ ಅಂತಾ ಚೆಂಜ್ ಮಾಡಿದರು.
ಇನ್ನು ನಾಗರಹಾವು ಚಿತ್ರದ ಪ್ರತಿ ಸನ್ನಿವೇಶ, ಹಾಡು ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಅಷ್ಟರಮಟ್ಟಿಗೆ ಮೋಡಿ ಮಾಡಿದ ಸಿನಿಮಾ ಇದು. 1972ರಲ್ಲಿ ನಾಗರಹಾವು ಸಿನಿಮಾ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹೊಸ ದಾಖಲೆ ಬರೆದಿತ್ತು. ಇಡೀ ಸಿನಿಮಾ ಚಿತ್ರದುರ್ಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು.
ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾದ ಪ್ರತಿ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಟ್ಟಿದ್ದರು. ಚಾಮಯ್ಯ ಮೇಷ್ಟ್ರ ಪಾತ್ರದಲ್ಲಿ ಕೆ. ಎಸ್ ಅಶ್ವತ್ಥ, ರಾಮಾಚಾರಿಯಾಗಿ ವಿಷ್ಣುವರ್ಧನ್, ಕ್ರಿಶ್ಚಿಯನ್ ಪ್ರೇಯಸಿ ಮಾರ್ಗರೇಟ್ ಪಾತ್ರದಲ್ಲಿ ಶುಭ, ರಾಮಾಚಾರಿಯನ್ನು ಪ್ರೀತಿಸುವ ಅಲಮೇಲು ಪಾತ್ರದಲ್ಲಿ ಆರತಿ, ಗರಡಿ ಉಸ್ತಾದ್ ಪಾತ್ರದಲ್ಲಿ ಎಂ.ಪಿ ಶಂಕರ್, ಅಲಮೇಲುನ ರೇಗಿಸುವ ಜಲೀಲನಾಗಿ ಅಂಬರೀಷ್, ಕಾಲೇಜು ಪ್ರಿನ್ಸಿಪಾಲ್ ಆಗಿ ಲೋಕನಾಥ್, ರಾಮಚಾರಿ ತಾಯಿ ಜಯಶ್ರೀ, ದೇವ್ರೇ ದೇವ್ರೇ ಎನ್ನುತ್ತ ರಾಮಾಚಾರಿಯ ಸಾಕು ತಾಯಿ ತುಂಗಮ್ಮ ಆಗಿ ಲೀಲಾವತಿ, ರಾಮಾಚಾರಿಯ ಸ್ನೇಹಿತ ವರದನಾಗಿ ಹಿರಿಯ ನಟ ಶಿವರಾಂ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನದಲ್ಲಿ ಉಳಿದಿದ್ದರು.