ತಮಿಳು ನಟ ವಿಶಾಲ್ ಅವರು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (Central Board of Film Certification-CBFC)) ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದರು. ತಮ್ಮ 'ಮಾರ್ಕ್ ಆ್ಯಂಟೋನಿ' ಸಿನಿಮಾದ ಹಿಂದಿ ಆವೃತ್ತಿಗೆ ಒಪ್ಪಿಗೆ ಪಡೆಯಲು ಸಿಬಿಎಫ್ಸಿಗೆ 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದು ದೂರಿದ್ದರು. ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದ್ದು, ಮೂವರು ವ್ಯಕ್ತಿಗಳು ಮತ್ತು ಸಿಬಿಎಫ್ಸಿನ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದೆ.
ರಾಜನ್ ಎಂ, ಮೆರ್ಲಿನ್ ಮೆನಗಾ ಮತ್ತು ಜೀಜಾ ರಾಮ್ ಬಂಧಿತರು. "ಮಾರ್ಕ್ ಆ್ಯಂಟೋನಿ ಸಿನಿಮಾದ ಹಿಂದಿ ಡಬ್ಬಿಂಗ್ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ನಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ಖಾಸಗಿ ವ್ಯಕ್ತಿಯೊಬ್ಬರು 7 ಲಕ್ಷಕ್ಕೆ ಲಂಚದ ಬೇಡಿಕೆ ಇಟ್ಟಿರುವುದು ನಿಜ" ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಆರೋಪಿಗಳು ಆರಂಭದಲ್ಲಿ ಸಿಬಿಎಫ್ಸಿ ಮುಂಬೈ ಅಧಿಕಾರಿಗಳ ಪರವಾಗಿ 7 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ಮೊತ್ತವನ್ನು 6 ಲಕ್ಷದ 54 ಸಾವಿರಕ್ಕೆ ಇಳಿಸಲಾಯಿತು. ಇಬ್ಬರು ಆರೋಪಿಗಳ ಎರಡು ಬ್ಯಾಂಕ್ ಖಾತೆಗಳಲ್ಲಿ ಸಿಬಿಎಫ್ಸಿ ಮುಂಬೈ ಅಧಿಕಾರಿಗಳ ಪರವಾಗಿ 6,54,000 ರೂ.ಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ" ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ:'ವಿಶಾಲ್ ಸಿಬಿಎಫ್ಸಿ ಚಿತ್ರಣ ತೆರೆದಿಟ್ಟಿದ್ದಾರೆ, ಭ್ರಷ್ಟಾಚಾರ ನಡೆಯುತ್ತಿದೆ': ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ!
ಕೆಲವು ದಿನಗಳ ಹಿಂದೆ ನಟ ವಿಶಾಲ್, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಿಬಿಎಫ್ಸಿ ವಿರುದ್ಧ ಭ್ರಷ್ಟಾಚಾರ ಆರೋಪದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. "ಭ್ರಷ್ಟಾಚಾರವನ್ನು ಬೆಳ್ಳಿತೆರೆಯಲ್ಲಿ ತೋರಿಸುವುದು ಒಳ್ಳೆಯದು. ಆದರೆ ನಿಜ ಜೀವನದಲ್ಲಿ ಅಲ್ಲ. ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಿಬಿಎಫ್ಸಿಯ ಮುಂಬೈ ಕಚೇರಿಯಲ್ಲಿ ಇನ್ನೂ ಕೆಟ್ಟದಾಗಿ ನಡೆಯುತ್ತಿದೆ. ನನ್ನ ಚಲನಚಿತ್ರ ಮಾರ್ಕ್ ಆ್ಯಂಟೋನಿ ಹಿಂದಿ ಆವೃತ್ತಿಗೆ 6.5 ಲಕ್ಷಗಳನ್ನು ಪಾವತಿಸಬೇಕಾಗಿಯಿತು. ಎರಡು ವಹಿವಾಟುಗಳಲ್ಲಿ, ಸ್ಕ್ರೀನಿಂಗ್‌ಗೆ 3 ಲಕ್ಷ ಮತ್ತು ಪ್ರಮಾಣಪತ್ರಕ್ಕಾಗಿ 3.5 ಲಕ್ಷ ಲಂಚ ಕೇಳಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದರು.
"ನನ್ನ ವೃತ್ತಿಜೀವನದಲ್ಲಿ ಈ ಪರಿಸ್ಥಿತಿಯನ್ನು ಎಂದಿಗೂ ಅನುಭವಿಸಿಲ್ಲ. ಚಲನಚಿತ್ರವು ಬಿಡುಗಡೆ ಮಾಡಬೇಕಾಗಿದ್ದ ಕಾರಣಕ್ಕಾಗಿ ಸಂಬಂಧಪಟ್ಟ ಮಧ್ಯವರ್ತಿಗೆ ಪಾವತಿಸುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆ ಇರಲಿಲ್ಲ. ನಾನು ಈ ವಿಚಾರವನ್ನು ಮಹಾರಾಷ್ಟ್ರದ ಗೌರವಾನ್ವಿತರ ಗಮನಕ್ಕೆ ತರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಇದು ನನಗಲ್ಲ, ಆದರೆ, ಭವಿಷ್ಯದ ನಿರ್ಮಾಪಕರಿಗಾಗಿ. ನನ್ನ ದುಡಿಮೆಯ ಹಣ ಭ್ರಷ್ಟಾಚಾರಕ್ಕೆ ಹೋಯಿತು. ಸತ್ಯವು ಎಂದಿನಂತೆ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದರು.
ವಿಶಾಲ್ ಮತ್ತು ಎಸ್.ಜೆ.ಸೂರ್ಯ ಅಭಿನಯದ ಇತ್ತೀಚಿನ ತಮಿಳು ಚಿತ್ರ 'ಮಾರ್ಕ್ ಆ್ಯಂಟೋನಿ' ಪ್ರೇಕ್ಷಕರ ಮನಗೆಲ್ಲುತ್ತಿದೆ. ಬಾಕ್ಸ್ ಆಫೀಸ್ ಗೆಲುವು ಮುಂದುವರೆಸಿದೆ. ಈ ಚಿತ್ರವು ಅಧಿಕ್ ರವಿಚಂದ್ರನ್ ನಿರ್ದೇಶನದ ವೈಜ್ಞಾನಿಕ ಕಾಲ್ಪನಿಕ ಟೈಮ್ ಟ್ರಾವೆಲ್ ಕುರಿತ ಕಥಾ ಹಂದರ ಹೊಂದಿದೆ.
ಇದನ್ನೂ ಓದಿ:ಸಿಬಿಎಫ್ಸಿ ವಿರುದ್ಧ ಭ್ರಷ್ಟಾಚಾರ ಆರೋಪ: ಹೆಚ್ಚಿನ ಮಾಹಿತಿ ಹಂಚಿಕೊಂಡ ತಮಿಳು ನಟ ವಿಶಾಲ್!