ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ಪಠಾನ್‌ನ ಹಾಡುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರ್ಮಾಪಕರಿಗೆ ಸಲಹೆ ನೀಡಿದೆ ಎಂದು ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.
ಸಿಬಿಎಫ್‌ಸಿ ಪರೀಕ್ಷೆ:ಚಲನಚಿತ್ರ ತಂಡ ಇತ್ತೀಚೆಗೆ ಪ್ರಮಾಣೀಕರಣಕ್ಕಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪರಿಶೀಲನಾ ಸಮಿತಿಯನ್ನು ತಲುಪಿತು. ಮಾರ್ಗಸೂಚಿಗಳ ಪ್ರಕಾರ ಸರಿಯಾದ ಮತ್ತು ಸಂಪೂರ್ಣ ಪರಿಶೀಲನಾ ಪ್ರಕ್ರಿಯೆ ನಡೆಯಿತು.
ಪ್ರಸೂನ್ ಜೋಶಿ ಹೇಳಿದ್ದೇನು? "ಸಿಬಿಎಫ್‌ಸಿ ಮಾರ್ಗಸೂಚಿಗಳ ಪ್ರಕಾರ ಪಠಾಣ್ ಚಿತ್ರ ಪರಿಶೀಲನೆ ಪ್ರಕ್ರಿಯೆ ನಡೆದಿದೆ. ಹಾಡುಗಳು ಸೇರಿದಂತೆ ಚಿತ್ರದಲ್ಲಿಯೂ ಕೆಲ ಬದಲಾವಣೆಗಳನ್ನು ಅಳವಡಿಸಲು ಮತ್ತು ಚಿತ್ರಮಂದಿರದ ಬಿಡುಗಡೆಗೆ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಮಿತಿಯು ತಯಾರಕರಿಗೆ ತಿಳಿಸಿದೆ" ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಮಾಹಿತಿ ನೀಡಿದ್ದಾರೆ.
ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಸಂವೇದನೆಯ ನಡುವೆ ಸರಿಯಾದ ಸಮತೋಲನವನ್ನು ಕಂಡುಕೊಳ್ಳಲು ಸಿಬಿಎಫ್‌ಸಿ ಯಾವಾಗಲೂ ಬದ್ಧವಾಗಿದೆ. ಮತ್ತು ಎಲ್ಲಾ ಮಧ್ಯಸ್ಥಗಾರರ ನಡುವೆ ಅರ್ಥಪೂರ್ಣ ಸಂಭಾಷಣೆಯ ಮೂಲಕ ನಾವು ಯಾವಾಗಲೂ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಜೋಶಿ ಹೇಳಿದರು.
ಬೇಶರಂ ರಂಗ್ ವಿವಾದ:ಬಾಲಿವುಡ್ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟನೆಯ ಪಠಾನ್ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023 ಜನವರಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಬಹುನಿರೀಕ್ಷಿತ ಪಠಾಣ್ ಸಿನಿಮಾದ ಮೊದಲ ಟ್ರ್ಯಾಕ್ ''ಬೇಶರಂ ರಂಗ್'' ಎರಡು ವಾರದ ಹಿಂದೆ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಏರಿಸುವ ಜೊತೆಗೆ ವಾದ ವಿವಾದಕ್ಕೆ ವೇದಿಕೆ ಸೃಷ್ಟಿಮಾಡಿಕೊಟ್ಟಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕೆಮಿಸ್ಟ್ರಿ ಸಖತ್ ವರ್ಕ್ ಔಟ್ ಆಗಿದೆ. ಈ ಜೋಡಿ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಕೊನೆಯಲ್ಲಿ ದೀಪಿಕಾ ಧರಿಸಿದ ಕೇಸರಿ ಬಣ್ಣ ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಹುತೇಕ ಕಡೆ ಈ ಜೋಡಿ ವಿರುದ್ಧ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿವೆ.