ಕಳೆದ ನಾಲ್ಕೈದು ದಿನಗಳಿಂದ ದಕ್ಷಿಣ ಚಿತ್ರರಂಗದಲ್ಲಿ 'ಹೇಳಿಕೆ'ಯೊಂದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಬಗೆಗಿನ ನಟ ಮನ್ಸೂರ್ ಅಲಿ ಖಾನ್ ಅವರ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನಟನ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರು, ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಖ್ಯಾತನಾಮರಿಂದ ಸಾಕಷ್ಟು ಟೀಕೆ ಸ್ವೀಕರಿಸಿದೆ.
ನಟಿ ತ್ರಿಶಾ ಕೃಷ್ಣನ್ ಜೊತೆ 'ಬೆಡ್ ರೂಮ್ ಸೀನ್' ಸಿಕ್ಕಿಲ್ಲ ಎಂದು ಸಂದರ್ಶನವೊಂದರಲ್ಲಿ ಮನ್ಸೂರ್ ಅಲಿ ಖಾನ್ ತಮ್ಮ ನಿರಾಶೆ ವ್ಯಕ್ತಪಡಿಸಿದ್ದರು. ಅಶ್ಲೀಲ ಕಾಮೆಂಟ್ ಮಾಡಿದ ನಟ ಸದ್ಯ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆ ವ್ಯಕ್ತವಾದ ನಂತರ ಚೆನ್ನೈ ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲಿಯೋ ಚಿತ್ರದಲ್ಲಿ ನಟಿಯೊಂದಿಗೆ ರೊಮ್ಯಾಂಟಿಕ್ ಸೀನ್ಗಳನ್ನು ಚಿತ್ರೀಕರಿಸುವ ಅವಕಾಶ ಸಿಗಲಿಲ್ಲ ಎಂದು ತಮ್ಮ ಬೇಸರ ಹೊರ ಹಾಕಿದ್ದರು. ಅವರ ಈ ಒಂದು ಹೇಳಿಕೆ ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದೆ.
ಮನ್ಸೂರ್ ಅಲಿ ಖಾನ್ ಸಂದರ್ಶನದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ವತಃ ನಟಿ ತ್ರಿಶಾ ಕೃಷ್ಣನ್ ಕಟುವಾಗಿ ಪ್ರತಿಕ್ರಿಯಿಸಿದ್ದರು. ನಟನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದರು. ಅವರ ಹೇಳಿಕೆಗಳು ಲೈಂಗಿಕ, ಅಗೌರವ ಮತ್ತು ಸ್ತ್ರೀದ್ವೇಷವನ್ನು ನಿರೂಪಿಸಿದೆ ಎಂದು ಕಿಡಿಕಾರಿದ್ದರು. ಜೊತೆಗೆ ಭವಿಷ್ಯದಲ್ಲಿ ಅವರೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ ಎಂದು ತ್ರಿಶಾ ದೃಢವಾಗಿ ಘೋಷಿಸಿದ್ದರು. ನಟಿಯ ಪ್ರತಿಕ್ರಿಯೆ ಸಖತ್ ಸದ್ದು ಮಾಡಿತು. ದಕ್ಷಿಣ ಚಿತ್ರರಂಗದ ಗಣ್ಯರು ಸಹ ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ಖಂಡಿಸಿದರು. ಮೆಗಾಸ್ಟಾರ್ ಚಿರಂಜೀವಿ, ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್, ಹಿರಿಯ ನಟಿ ಖುಷ್ಬೂ ಸೇರಿದಂತೆ ಹಲವರು ನಟಿ ತ್ರಿಶಾ ಕೃಷ್ಣನ್ ಬೆಂಬಲಕ್ಕೆ ನಿಂತಿದ್ದಾರೆ.