ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಾರಿಗೆ? ಯಾವಾಗ? ಅದೃಷ್ಟ ದೇವತೆ ಒಲಿಯುತ್ತಾಳೆ ಎಂಬುದನ್ನು ಊಹಿಸಿ ಹೇಳಲು ಸಾಧ್ಯವಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೆಲವರು ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಕೆಲವರು ಒಂದೆರಡು ಸಿನಿಮಾಗಳಲ್ಲೇ ಸೂಪರ್ ಹಿಟ್ ಆಗಿ ಬಿಡುತ್ತಾರೆ. ಈ ಮಾತು 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದಲ್ಲಿ ಶಿವಾನಿ ಪ್ರಾತ್ರದಲ್ಲಿ ಅಭಿನಯಿಸಿದ್ದ ಚೆಲುವೆ ಬೃಂದಾ ಆಚಾರ್ಯ ಜೀವನದಲ್ಲಿ ನಿಜವಾಗುತ್ತಿದೆ. ಶಿವಾನಿಯಾಗಿ ಪ್ರೇಕ್ಷಕರ ಗಮನ ಸೆಳೆದ ಬೃಂದಾ ಮುಂದೀಗ ಸಾಕಷ್ಟು ಅವಕಾಶಗಳಿವೆ. ಇತ್ತೀಚೆಗೆ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.
ನಿರೂಪ್ ಭಂಡಾರಿಗೆ ಜೋಡಿಯಾಗಿ ಇವರು ನಟಿಸಲಿದ್ದಾರೆ. ಶೀರ್ಷಿಕೆ ಫೈನಲ್ ಆಗದ ಈ ಚಿತ್ರವನ್ನು ಸಚಿನ್ ವಾಲಿ ನಿರ್ದೇಶನ ಮಾಡುವರು. ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಸಚಿನ್ ಪಾಲಿಗಿದು ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡಲು ಸಿಕ್ಕ ಚೊಚ್ಚಲ ಅವಕಾಶ. ಬೃಂದಾ ಅವರಿಗೂ ವಿಭಿನ್ನ ಪಾತ್ರ ಸಿಕ್ಕಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಅಮರ್ ಚಿತ್ರದಲ್ಲಿ ವರದಿಗಾರ್ತಿಯಾಗಿ ನಟಿಸಲಿದ್ದಾರೆ.
ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿನ ಶಿವಾನಿ ಪಾತ್ರದ ಅಭಿನಯಕ್ಕೆ ಬೃಂದಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ತದನಂತರ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಜೊತೆಗಿನ 'ಎಕ್ಸ್ ಆ್ಯಂಡ್ ವೈ', ಎಸ್.ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಚಿತ್ರಗಳು ನಟಿ ಬೃಂದಾ ಅವರ ಕೈಯಲ್ಲಿವೆ. ಕಥೆ, ಪಾತ್ರವನ್ನು ಇಷ್ಟಪಟ್ಟು ಬೃಂದಾ ಅಭಿನಯಿಸುತ್ತಿದ್ದಾರೆ. ಹೊಸ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳನ್ನು ಇವರು ಇಟ್ಟುಕೊಂಡಿದ್ದಾರೆ.