ಸ್ಯಾಂಡಲ್ವುಡ್ನ ಸ್ವ-ಮೇಕ್ ನಿರ್ದೇಶಕರಾದ ಶಶಾಂಕ್ ವಿಭಿನ್ನ ಕಂಟೆಂಟ್ ಸಿನಿಮಾಗಳನ್ನು ಮಾಡುತ್ತ ಫೇಮಸ್ ಆಗಿದ್ದಾರೆ. ಮೊಗ್ಗಿನ ಮನಸು, ಬಚ್ಚನ್, ಮುಂಗಾರು ಮಳೆ 2, ಕೃಷ್ಣನ್ ಲವ್ ಸ್ಟೋರಿ ಇಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನ್ನಡಿಗರ ಮನಗೆದ್ದಿರುವ ಶಶಾಂಕ್ ಇದೀಗ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಅವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
ಹೌದು. 'ಕೌಸಲ್ಯಾ ಸುಪ್ರಜಾ ರಾಮ' ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಈ ಸಿನಿಮಾಗೆ ನಾಯಕಿ ಆಯ್ಕೆಯಾಗಿರಲಿಲ್ಲ. ಇದೀಗ ಕೊನೆಗೂ ಹೀರೋಯಿನ್ ಸೆಲೆಕ್ಟ್ ಆಗಿದ್ದು, ಕೃಷ್ಣನ ಜೊತೆ ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಅಭಿನಯಿಸುತ್ತಿದ್ದಾರೆ ಎಂದು ಶಶಾಂಕ್ ಮೊದಲೇ ಹೇಳಿದ್ದರು. ಈ ಪೈಕಿ ಬೃಂದಾ ಫೈನಲ್ ಆಗಿದ್ದು, ಇನ್ನೋರ್ವ ನಾಯಕಿಯಾಗಿ ಮಿಲನಾ ನಾಗರಾಜ್ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಜೂಲಿಯಟ್ 2 ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಂದಾ ಆಚಾರ್ಯ 'ಕೌಸಲ್ಯಾ ಸುಪ್ರಜಾ ರಾಮ'ದಲ್ಲಿ ಶಿವಾನಿ ಪಾತ್ರ ನಿರ್ವಹಿಸಲಿದ್ದಾರೆ. ಇದೊಂದು ತಾಯಿ, ಮಗನ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ಡಾರ್ಲಿಂಗ್ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಗಿರಿರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ದೃಶ್ಯ 2 ಸಿನಿಮಾ ಬಳಿಕ ಮತ್ತೊಂದು ಕೌಟುಂಬಿಕ ಚಿತ್ರದಲ್ಲಿ ಕ್ರೇಜಿಸ್ಟಾರ್