ಹಾಲಿವುಡ್ ನಟ ಮಾರ್ಕ್ ಮಾರ್ಗೋಲಿಸ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ನ್ಯೂಯಾರ್ಕ್ ನಗರದ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ನಟ 'ಬ್ರೇಕಿಂಗ್ ಬ್ಯಾಡ್' ಮತ್ತು 'ಬೆಟರ್ ಕಾಲ್ ಸಾಲ್' ಶೋನ ಹೆಕ್ಟರ್ ಸಲಾಮಾಂಕಾ ಪಾತ್ರಕ್ಕೆ ಹೆಸರು ವಾಸಿಯಾಗಿದ್ದಾರೆ. ಮಾರ್ಕ್ ಮಾರ್ಗೋಲಿಸ್ ನಿಧನದ ಸುದ್ದಿಯನ್ನು ಅವರ ಮಗ ಮಾರ್ಗನ್ ಮಾರ್ಗೋಲಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾರ್ಕ್ ಮಾರ್ಗೋಲಿಸ್ ಫೇಮಸ್ ನಟ: ಹಾಲಿವುಡ್ ಚಿತ್ರರಂಗಕ್ಕೆ ಮಾರ್ಕ್ ಮಾರ್ಗೋಲಿಸ್ ಕೊಡುಗೆ ಅಪಾರ. ಸಾಕಷ್ಟು ಅದ್ಭುತ ಚಿತ್ರಗಳನ್ನು ನೀಡಿದ್ದಾರೆ. 2012 ರಲ್ಲಿ ಅವರು 'ಬ್ರೇಕಿಂಗ್ ಬ್ಯಾಡ್' ಚಿತ್ರಕ್ಕಾಗಿ ಎಮ್ಮಿಗೆ ನಾಮ ನಿರ್ದೇಶನಗೊಂಡಿದ್ದರು. ಮಾರ್ಕ್ ಮಾರ್ಗೋಲಿಸ್ ಅವರು 1939 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಿಸಿದರು. ನಟನೆಯಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು.
ಮೊದಲಿಗೆ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 'ಇನ್ಫಿಡೆಲ್ ಸೀಸರ್'ನಂತಹ ಮ್ಯೂಸಿಕಲ್ಸ್ನಲ್ಲಿ ಪಾತ್ರಗಳನ್ನು ಪಡೆದರು. ಬಳಿಕ 'ಅಂಕಲ್ ಸ್ಯಾಮ್' ಮತ್ತು 'ದಿ ಗೊಲೆಮ್' ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಆಫ್ ಬ್ರಾಡ್ವೇ ನಿರ್ಮಾಣಗಳಲ್ಲಿ ಕಾಣಿಸಿಕೊಂಡರು. 'ಬ್ರೇಕಿಂಗ್ ಬ್ಯಾಡ್' ಮತ್ತು 'ಬೆಟರ್ ಕಾಲ್ ಸಾಲ್' ಶೋಗಾಗಿ ಮಾರ್ಕ್ ಮಾರ್ಗೋಲಿಸ್ ಹೆಚ್ಚು ಫೇಮಸ್ ಆಗಿದ್ದಾರೆ.