ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಇಂದು ಚೆನ್ನೈನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆಯಿತು. ರಣ್ಬೀರ್ ಕಪೂರ್, ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ನಟ ನಾಗಾರ್ಜುನ ಮಾಧ್ಯಮಗಳ ಮುಂದೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಕಾಮೆಂಟ್ವೊಂದರ ಸಲುವಾಗಿ ರಣಬೀರ್ ಕಪೂರ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದರು.
ಏ.14, 2022ರಂದು ಮುಂಬೈನ ಬಾಂದ್ರಾದಲ್ಲಿರುವ ರಣ್ಬೀರ್ ಕಪೂರ್ ನಿವಾಸದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಜೂನ್ 27 ರಂದು ಈ ದಂಪತಿ ತಾವು ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಸಹ ನೀಡಿದ್ದರು.
ಆದರೆ ಇತ್ತೀಚೆಗೆ ಗರ್ಭಾವಸ್ಥೆಯಲ್ಲಿರುವ ಆಲಿಯಾ ಭಟ್ ತೂಕ ಹೆಚ್ಚಿಕೊಳ್ಳುತ್ತಿರುವ ಬಗ್ಗೆ ರಣ್ಬೀರ್ ಕಪೂರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕೆಲವರು ಜೋಕ್ ಆಗಿ ಸ್ವೀಕರಿಸಿದ್ದರೆ ಮತ್ತೆ ಹಲವರಿಗೆ ಹಿಡಿಸಿಲ್ಲ. ರಣ್ಬೀರ್ ಕಪೂರ್ ಹೇಳಿಕೆಯನ್ನು ಸಾಕಷ್ಟು ನೆಟಿಜೆನ್ಗಳು ವಿರೋಧಿಸಿದ್ದರು. ಈ ಬಗ್ಗೆ ಇಂದಿನ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.