ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಹೊಸತನದ ಸಿನಿಮಾಗಳಿಗೆ ಪ್ರೇಕ್ಷಕರು ಸ್ಪಂದಿಸುತ್ತಿದ್ದಾರೆ. ಅಂಥ ಸಿನಿಮಾಗಳ ಸಾಲಿಗೆ ಸೇರಲು ಸಜ್ಜಾಗಿರುವ ಹೊಸ ಸಿನಿಮಾವೇ 'ಬ್ರಹ್ಮರಾಕ್ಷಸ'. ಓರ್ವ ಲೈಟ್‌ಮ್ಯಾನ್ ಆಗಿ ಫಿಲ್ಮ್ ಇಂಡಸ್ಟ್ರಿಗೆ ಬಂದು ಹಲವು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್ ವಿ ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು.
'ಬ್ರಹ್ಮರಾಕ್ಷಸ' ಟೀಸರ್: 'ಕಲಿವೀರ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಏಕಲವ್ಯ ಅವರೀಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಂಕುಶ್ ಏಕಲವ್ಯ 'ಬ್ರಹ್ಮರಾಕ್ಷಸ'ನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಅಂಕುಶ್ ಏಕಲವ್ಯ ಮಾತನಾಡಿ, ಇದು 70 ಹಾಗು 80ರ ದಶಕದಲ್ಲಿ ನಡೆಯುವ ಕಥೆ. ಕಲಿವೀರ ಸಿನಿಮಾ ಮಾಡುವಾಗಲೇ ಶಂಕರ್ ಪರಿಚಯವಾದರು. ಬಳಿಕ ಅವರನ್ನು ನಾನೇ ನಿರ್ಮಾಪಕರಿಗೆ ಪರಿಚಯಿಸಿದೆ. ಸಿನಿಮಾಗಾಗಿ ನಾವೆಷ್ಟೇ ಕಷ್ಟ ಪಟ್ಟಿದ್ದರೂ ತೆರೆಮೇಲೆ ನೋಡಿದಾಗ ಅದೆಲ್ಲ ಮರೆತುಹೋಗುತ್ತದೆ ಎಂದು ತಿಳಿಸಿ ಭಾವುಕರಾದರು. ನಾಯಕಿ ಪಲ್ಲವಿಗೌಡ ಮಾತನಾಡಿ, ಇಡೀ ಸಿನಿಮಾ ರಾತ್ರಿ ವೇಳೆಯಲ್ಲೇ ನಡೆಯುತ್ತದೆ. ಅಂಕುಶ್ ಗರ್ಲ್ ಫ್ರೆಂಡ್, ಬಳಿಕ ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ನಿರ್ದೇಶಕ ಶಂಕರ್ ಮಾತನಾಡುತ್ತಾ, ನಾನು ಸಿನಿಮಾಗೆ ಬರುತ್ತೇನೆಂದು ಅಂದುಕೊಂಡೇ ಇರಲಿಲ್ಲ. ಬಡತನದಲ್ಲೇ ಬೆಳೆದವನು. 3 ಕಿರುಚಿತ್ರಗಳನ್ನು ಮಾಡಲು ನನ್ನ ತಾಯಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಬಳಿಕ ತಮ್ಮ ಈ ಸಿನಿಮಾ ಕುರಿತು ಮಾತನಾಡಿ, ಬ್ರಹ್ಮರಾಕ್ಷಸ 1980ರ ಸಮಯದಲ್ಲಿ ನಡೆಯುವ ಒಂದು ರಿವೆಂಜ್ ಸ್ಟೋರಿಯಾಗಿದ್ದು, ಜೊತೆಗೊಂದು ಮೆಸೇಜ್ ಕೂಡ ಇದೆ. ಮೂವರು ಸಮಾಜಕ್ಕೆ ಒಳ್ಳೆಯದು ಮಾಡಲೆಂದು ಹೊರಟಾಗ ಯಾವುದೋ ಒಂದು ಘಟನೆ ನಡೆಯುತ್ತದೆ. ಇಲ್ಲಿ ನಾಯಕ ಹಾಗೂ ಬಿರಾದಾರ್ ಮಾವ-ಅಳಿಯನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 90ರಷ್ಟು ಭಾಗವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದ್ದು, ಬಹುತೇಕ ಕಥೆ ಮಳೆಯಲ್ಲೇ ನಡೆಯುತ್ತದೆ ಎಂದರು.