ಶುಕ್ರವಾರ ರಾತ್ರಿ (ನಿನ್ನೆ, 31-3-2023) ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಉದ್ಘಾಟನಾ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕಾಗಿ ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಲಾ ಹಾಗೂ ಮನರಂಜನಾ ಪ್ರಪಂಚದ ಗಣ್ಯಾತಿಗಣ್ಯರು ಜಮಾಯಿಸಿದ್ದರು. ಅತ್ಯದ್ಭುತ ವೇಷಭೂಷಣದಲ್ಲಿ ನಟ ನಟಿಯರು ಕಂಗೊಳಿಸಿದ್ದು, ಕಾರ್ಯಕ್ರಮದ ಚಿತ್ತಾರಗಳು ವರ್ಚುವಲ್ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ.
ಈ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರು ತಮ್ಮ ಪುತ್ರಿ ಜಾನ್ವಿ ಕಪೂರ್ ಅವರ ವದಂತಿಯ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಆಗಮಿಸಿದರು. ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಸಹ ಈವೆಂಟ್‌ನಲ್ಲಿ ಭಾಗಿಯಾಗಿದ್ದು, ತಂದೆ ಮತ್ತು ಗೆಳೆಯನೊಂದಿಗೆ ಕಾಣಿಸಿಕೊಂಡಿಲ್ಲ. ಶಿಖರ್ ಪಹಾರಿಯಾ ಮತ್ತು ಬೋನಿ ಕಪೂರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಬಿಳಿ ಬಣ್ಣದ ಉಡುಪಿನಲ್ಲಿ ಬಾಲಿವುಡ್ ಬ್ಯೂಟಿ ಕಂಗೊಳಿಸಿದ್ದು, ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದ ವಿಡಿಯೋಗಳು, ಪೋಟೋಗಳಲ್ಲಿ ಬೋನಿ ಕಪೂರ್ ಮತ್ತು ಶಿಖರ್ ಪಹಾರಿಯಾ ಒಟ್ಟಿಗೆ ಆಗಮಿಸುತ್ತಿರುವುದನ್ನು ಕಾಣಬಹುದು. ಬೋನಿ ಕಪೂರ್ ಬೂದು ಬಣ್ಣದ ಸೂಟ್ ಧರಿಸಿ ಕಾಣಿಸಿಕೊಂಡಿದ್ದು, ಶಿಖರ್ ಅವರು ಹಸಿರು ಬಣ್ಣದ ವೆಲ್ವೆಟ್ ಸೂಟ್ ಅನ್ನು ಆಯ್ಕೆ ಮಾಡಿಕೊಂಡರು. ಅವರು ಬಿಳಿ ಶರ್ಟ್ ಮತ್ತು ಹೈ-ವೇಸ್ಟ್ ಗ್ರೇ ಪ್ಯಾಂಟ್, ಕೋಟ್ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಶಿಖರ್ ಮತ್ತು ಬೋನಿ ಒಟ್ಟಿಗೆ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದರು.