ಪ್ರಿಮಿಯರ್ ಪದ್ಮಿನಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಹುಟ್ಟಿಸಿರೋ ನಟ ಪ್ರಮೋದ್. ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಸೂರೆಗೊಂಡ ಪ್ರಮೋದ್ ಈಗ ಬಾಂಡ್ ರವಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು, ಸದ್ಯ ಬಾಂಡ್ ರವಿ ಸಿನಿಮಾ ಟೀಸರ್ ರಿಲೀಸ್ ಆಗಿ 1 ಮಿಲಿಯನ್ಗೂ ಹೆಚ್ಚು ಜನ ನೋಡಿ ಫಿದಾ ಆಗಿದ್ದಾರೆ. ಪ್ರಮೋದ್ ಖಡಕ್ ಅಂಡ್ ಮಾಸ್ ಆ್ಯಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ.
ಬಾಂಡ್ ರವಿ ಸಿನಿಮಾ ಟೀಸರ್ ಪತ್ರಕರ್ತರಿಂದ ಬಿಡುಗಡೆಯಾಗಿದ್ದು ವಿಶೇಷ. ಇದಕ್ಕೆ ಕಾರಣ ನಟ ಪ್ರಮೋದ್. ನಾನು ಶೈನ್ ಆಗಿಲ್ಲದೇ ಇದ್ದಾಗಿನಿಂದಲೂ ನನ್ನನ್ನು ಸಪೋರ್ಟ್ ಮಾಡಿಕೊಂಡು ಬಂದವರು ಪತ್ರಕರ್ತರು. ಎಂಟು ವರ್ಷದಿಂದ ನನ್ನ ಪ್ರತಿ ಹೆಜ್ಜೆಯಲ್ಲಿ ಮಾಧ್ಯಮ ಮಿತ್ರರ ಬೆಂಬಲ ಬಹಳ ದೊಡ್ಡದು ಎಂದಿದ್ದಾರೆ ನಟ ಪ್ರಮೋದ್. ಈ ಹಿನ್ನೆಲೆ ಈ ಚಿತ್ರದ ಟೀಸರ್ ಅನ್ನು ಪತ್ರಕರ್ತ ಮಿತ್ರರೇ ಬಿಡುಗಡೆ ಮಾಡಿದ್ದಾರೆ.
'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ', ‘ಪ್ರೀಮಿಯರ್ ಪದ್ಮಿನಿ' ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿಕೊಂಡಿದ್ದಾರೆ. ಇದೀಗ ‘ಬಾಂಡ್ ರವಿ’ ಸಿನಿಮಾ ಕೂಡ ಭರವಸೆ ಹುಟ್ಟಿಸಿದೆ. ಪಂಚಿಂಗ್ ಹಾಗೂ ಮಾಸ್ ಡೈಲಾಗ್ಗಳು ಟೀಸರ್ನಲ್ಲಿ ಗಮನ ಸೆಳೆದಿದ್ದು, ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಈ ಬಗ್ಗೆ ನಟ ಪ್ರಮೋದ್ ಮಾತನಾಡಿ, ನಾನು ಈ ಸಿನಿಮಾವನ್ನು ತುಂಬಾ ಮೆಚ್ಚಿ ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಮೇಲೆ ನಂಬಿಕೆಯಿದೆ. ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಸಿನಿಮಾದಲ್ಲಿದೆ. ಈ ಸಿನಿಮಾ ಮೂಲಕ ನಾನು ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.
ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ:ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ದೊಡ್ಡ ಹಿಟ್ ಆಯ್ತು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರೂ ಅಮೋಘವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.