ಕನ್ನಡ ಸಿನಿಮಾಗಳು ಅಂದ್ರೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಷ್ಟಕ್ಕೆ ಅಷ್ಟೇ ಎಂಬ ಮಾತುಗಳು ಅದೊಂದು ಕಾಲದಲ್ಲಿ ಕೇಳಿ ಬಂದಿತ್ತು. ಆದರೆ ಈಗ ಕನ್ನಡದಲ್ಲಿ ಅದ್ಧೂರಿ ಮೇಕಿಂಗ್ ಹಾಗೂ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ನಿರ್ಮಾಣ ಆಗುತ್ತಿವೆ. ಜೊತೆಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಪಡೆಯುತ್ತಿರುವ ಕನ್ನಡ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
777 ಚಾರ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ಈ ಸಾಲಿನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಸೇರುತ್ತದೆ. ಚಾರ್ಲಿ ಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಂಬಾಟ್ ಆಫರ್ ನೀಡಿದ್ದರು. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನ ತೆರೆ ಮೇಲೆ ನೋಡಿ ಭಾವುಕರಾಗಿದ್ದ ಅವರು, ಕರ್ನಾಟಕ ಸರ್ಕಾರದಿಂದ ತೆರಿಗೆ ವಿನಾಯಿತಿ ನೀಡಿದ್ದರು.
ಇದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡಿದ ನರ್ಸ್ಗಳ ಕಥೆ ಆಧರಿಸಿರೋ ಸೆಪ್ಟೆಂಬರ್ 13 ಸಿನಿಮಾಗೂ ಆರು ತಿಂಗಳ ಕಾಲ ಬೊಮ್ಮಾಯಿ ಸರ್ಕಾರ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ನವೆಂಬರ್ 4 ರಂದು ಸೆಪ್ಟೆಂಬರ್ 13 ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದ್ದು, ಕೋವಿಡ್ ಕಾಲದಲ್ಲಿ ದಾದಿಯರ ಸೇವೆ, ತ್ಯಾಗ ಎತ್ತಿ ಹಿಡಿಯುವ ಕಥಾ ಹಂದರವನ್ನ ಸಿನಿಮಾ ಒಳಗೊಂಡಿದೆ.
ಗಂಧದ ಗುಡಿ ಸಿನಿಮಾದ ಪೋಸ್ಟರ್ ಇದನ್ನೂ ಓದಿ:ಸೆಪ್ಟೆಂಬರ್ 13 ಚಿತ್ರಕ್ಕೆ ಆರು ತಿಂಗಳ ತೆರಿಗೆ ವಿನಾಯಿತಿ ನೀಡಿದ ಸರ್ಕಾರ..
ಈ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾಗೆ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿದರು. ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತ ನೈಜ ಘಟನೆಗಳ ಆಧಾರಿತವಾಗಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಅಭಿನಯಿಸಿದ್ದಾರೆ.
ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ನಿನ್ನೆ ನಡೆದ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಂಧದ ಗುಡಿ ಸಿನಿಮಾಗೂ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: '777 ಚಾರ್ಲಿ'ಗೆ ಶ್ವಾನ ಪ್ರಿಯ ಸಿಎಂ ಬೊಮ್ಮಾಯಿ ಭರ್ಜರಿ ಗಿಫ್ಟ್ ; ಸಿನಿಮಾಗೆ ತೆರಿಗೆ ವಿನಾಯಿತಿ!
ಪುನೀತ್ ರಾಜ್ಕುಮಾರ್ಗೆ ಇದ್ದ ಪರಿಸರ ಕಾಳಜಿ, ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಹಾಗೂ ನಮ್ಮ ಕರ್ನಾಟಕದ ಅರಣ್ಯ ಸಂಪತ್ತಿನ ಬಗ್ಗೆ ಈ ಗಂಧದ ಗುಡಿ ಸಿನಿಮಾ ಒಳಗೊಂಡಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದು, ವೈಲ್ಡ್ ಫೋಟೋಗ್ರಾಫರ್ ಅಮೋಘ ವರ್ಷ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಈ ಚಿತ್ರ ಅಕ್ಟೋಬರ್ 28ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.