'ಬೊಂಬೆ ಹೇಳುತೈತೆ' ಹೆಸರು ಕೇಳುತ್ತಿದ್ದಂತೆ ದಿ.ಪುನೀತ್ ರಾಜ್‍ಕುಮಾರ್ ಕಣ್ಮುಂದೆ ಬರುತ್ತಾರೆ. ಈ ಹಾಡಿನ ಸಾಲೀಗ ಸಿನಿಮಾ ಟೈಟಲ್ ಆಗಿದೆ. ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆ ಸಜ್ಜಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇದೀಗ ನಟನಾಗಿ ಹಾಗೂ ನಿರ್ದೇಶಕನಾಗಿ ಯತಿರಾಜ್ ಅವರು ಗುರುತಿಸಿಕೊಂಡಿದ್ದಾರೆ. ಯತಿರಾಜ್ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ "ಬೊಂಬೆ ಹೇಳುತೈತೆ" ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿದ್ದು, ಈ ಕುರಿತು ಯತಿರಾಜ್ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರೋ ಯತಿರಾಜ್, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದುಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈವರೆಗೆ ಆರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು.
ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು, ಅದರಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಇದಕ್ಕೆ ಸ್ಫೂರ್ತಿ ಬಾಲಿವುಡ್ನ ಸುನಿಲ್ ದತ್ ಹಾಗೂ ತಮಿಳಿನ ಪಾರ್ಥಿಬನ್ ಎಂದರೆ ತಪ್ಪಾಗಲಾರದು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್ ಮುಂದೆ ಹೇಳಿದಾಗ, ಅವನು "ಬೊಂಬೆ ಹೇಳುತೈತೆ" ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದ್ದೇ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು ಎಂದರು.
ಇದನ್ನೂ ಓದಿ:ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ
ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರ ಸೆನ್ಸಾರ್ನಲ್ಲಿ ಪಾಸಾಗಿ ಬಿಡುಗಡೆ ಹೊಸ್ತಿಲಿನಲ್ಲಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂಬುದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೇ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.
ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ
ಈ ಚಿತ್ರಕ್ಕೆ ಪೃಥ್ವಿರಾಜ್ ಕಥೆ ಬರೆದಿದ್ದು, ವಿದ್ಯಾ ನಾಗೇಶ್ ಛಾಯಾಗ್ರಹಣವಿದೆ. ಸಹ ನಿರ್ದೇಶಕರಾಗಿ ಅರುಣ್ ಕೆಲಸ ಮಾಡಿದ್ದಾರೆ. ರಾಜ್ ಭಾಸ್ಕರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಪಿಆರ್ಓ ಸುಧೀಂದ್ರ ವೆಂಕಟೇಶ್, ಸಿರಿ ಮ್ಯೂಸಿಕ್ನ ಚಿಕ್ಕಣ್ಣ ಮತ್ತು ಮುಖ್ಯ ಅತಿಥಿಗಳಾಗಿ ಬಂದ ಬಿಬಿಎಂಪಿ ಸಂಪರ್ಕಾಧಿಕಾರಿ ಶಂಕರ್ ಚಿತ್ರಕ್ಕೆ ಶುಭ ಕೋರಿದರು. ಸದ್ಯ ಟ್ರೇಲರ್ನಿಂದ ಗಮನ ಸೆಳೆಯುತ್ತಿರೋ ಬೊಂಬೆ ಹೇಳುತೈತೆ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ.