ಮುಂಬೈ (ಮಹಾರಾಷ್ಟ್ರ) : ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ, ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಾಖಿ ಸಾವಂತ್ ಅವರನ್ನು ಬಲವಂತವಾಗಿ ಚುಂಬಿಸಿದ್ದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006 ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಅನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಜಿ ದಿಗ್ ಅವರಿದ್ದ ವಿಭಾಗೀಯ ಪೀಠವು ನಟಿ ರಾಖಿ ಸಾವಂತ್ ಅವರು ಸಲ್ಲಿಸಿದ್ದ ಅಫಿಡವಿಟ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಪ್ರಕರಣದಲ್ಲಿ ಸಲ್ಲಿಸಲಾದ ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ರದ್ದುಗೊಳಿಸಿತು. ರಾಖಿ ಮತ್ತು ಮಿಕಾ ಅವರು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಒಪ್ಪಿಗೆ ನೀಡಿದರು. ರಾಖಿ ಅವರ ವಕೀಲರು ಯಾವುದೇ ವಿರೋಧ ವ್ಯಕ್ತಪಡಿಸದೇ ಇರುವುದು, ಬಾಂಬೆ ಹೈಕೋರ್ಟ್ ಎಫ್‌ಐಆರ್ ರದ್ದುಪಡಿಸಲು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:2006ರ ಜೂನ್ 10ರಂದು ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಬರ್ತ್ ಡೇ ಪಾರ್ಟಿ ಆಯೋಜನೆಗೊಂಡಿತ್ತು. ಗಾಯಕ ಮಿಕಾ ಸಿಂಗ್ ಅವರು ಸ್ನೇಹಿತರು ಸೇರಿದಂತೆ ನಟ ನಟಿಯರನ್ನು ಈ ಭರ್ಜರಿ ಪಾರ್ಟಿಗೆ ಆಹ್ವಾನಿಸಿದ್ದರು. ರಾಖಿ ಕೂಡ ಈ ಕಾರ್ಯಕ್ರಮದಲ್ಲಿದ್ದರು. ಈ ಕಾರ್ಯಕ್ರಮದಲ್ಲಿ ನಟಿ, ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ರಾಖಿ ಸಾವಂತ್ ಅವರು ತಮಗೆ ಮಿಕಾ ಸಿಂಗ್ ಬಲವಂತವಾಗಿ ಚುಂಬಿಸಿದ್ದಾರೆ ಎಂದು ಆರೋಪಿಸಿದ್ದರು.