ಕಳೆದೊಂದು ತಿಂಗಳಲ್ಲಿ ತೆರೆಕಂಡಿರುವ ಸರಣಿ ಸಿನಿಮಾಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿವೆ. ಜೈಲರ್, ಗದರ್ 2, ಓಎಂಜಿ 2 ಸದ್ಯ ಸಖತ್ ಸುದ್ದಿಯಲ್ಲಿರುವ ಸಿನಿಮಾಗಳು. ಚಿತ್ರಗಳು ಬಿಡುಗಡೆ ಆಗಿ ಒಂದು ತಿಂಗಳು ಸಮೀಪಿಸುವುದರಲ್ಲಿದ್ದು, ಇನ್ನೂ ಕೂಡ ಚಿತ್ರತಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿವೆ.
ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ನಟನೆಯ ಗದರ್ 2 ಸಿನಿಮಾ 500 ಕೋಟಿ ರೂ. ದಾಟಲಿದೆ ಎಂದು ಸಿನಿ ವ್ಯವಹಾರ ಪಂಡಿತರು ಬಹಳ ಹಿಂದೆಯೇ ತಿಳಿಸಿದ್ದರು. ಆದ್ರೆ ಅದು ಯಾವಾಗ ಎಂಬುದೇ ನಮ್ಮ ಮುಂದಿದ್ದ ಪ್ರಶ್ನೆ. ಅಂತಿಮವಾಗಿ, ಸಿನಿಮಾ ತೆರೆಕಂಡ 24ನೇ ದಿನಕ್ಕೆ 500 ಕೋಟಿ ರೂ. (23 ದಿನಗಳ ಒಟ್ಟು ಕಲೆಕ್ಷನ್) ತಲುಪುವಲ್ಲಿ ಯಶಸ್ವಿ ಆಗಿದೆ.
ಗದರ್ 2 ಸಿನಿಮಾ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ ಚಿತ್ರದೊಂದಿಗೆ ಆಗಸ್ಟ್ 11 ರಂದು ತೆರೆಕಂಡಿತು. ಈ ಎರಡೂ ಕೂಡ ಬಾಲಿವುಡ್ನ ಬಹುನಿರೀಕ್ಷಿತ ಸೀಕ್ವೆಲ್ ಆಗಿದ್ದವು. ನಿರೀಕ್ಷೆಯಂತೆ ಓಎಂಜಿ 2 ಉತ್ತಮ ವ್ಯವಹಾರ ನಡೆದಿದ್ದರೆ, ಗದರ್ 2 ಅಭೂತಪೂರ್ವ ಯಶಸ್ಸು ಕಂಡಿದೆ. ಗದರ್ 2 ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 500.87 ಕೋಟಿ ರೂ. ಸಂಪಾದನೆ ಮಾಡುವಲ್ಲಿ ಯಶಸ್ವಿ ಆಗಿದೆ.
ಗದರ್ 2 VS ಪಠಾಣ್ 2: ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಗದರ್ 2 ಸಿನಿಮಾದ ಬಾಕ್ಸ್ ಆಫೀಸ್ ಸಂಖ್ಯೆ ಬಾಲಿವುಡ್ ಕಿಂಗ್ ಖಾನ್ ಅವರ ಬ್ಲಾಕ್ಬಸ್ಟರ್ ಪಠಾಣ್ ಸಿನಿಮಾ ಸಂಖ್ಯೆ ಸಮೀಪದಲ್ಲಿದೆ. ಪಠಾಣ್ 24ನೇ ದಿನಕ್ಕೆ 508.1 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಸದ್ಯ ಗದರ್ 2 ಕಲೆಕ್ಷನ್ 500.87 ಕೋಟಿ ರೂ. ಆಗಿದೆ. ವಿಶ್ವದಾದ್ಯಂತ ಸಾವಿರ ಕೋಟಿ ರೂ. ಗಳಿಸಿರುವ ಪಠಾಣ್ ಸಿನಿಮಾ ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ಒಟ್ಟು 543.09 ಕೋಟಿ ರೂ. ಸಂಪಾದನೆ ಮಾಡಿದೆ ಎನ್ನುವ ಮಾಹಿತಿ ಇದೆ. ಪಠಾಣ್ ದಾಖಲೆಯನ್ನು ಗದರ್ 2 ಬ್ರೇಕ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.