ಮುಂಬೈ: ಬಾಲಿವುಡ್ನ ಮೇಕಪ್ ಕಲಾವಿದೆ ಸಾರಾ ಯಂತನ್ (26) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ರಾತ್ರಿ ಮುಂಬೈನ ಖಾರ್ ದಂಡಾದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಾರಾ ಕೈಗಳಿಗೆ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾರಾ ತಾಯಿ ರೋಸಿ ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿವರ: ಮೂಲತಃ ನಾಗಾಲ್ಯಾಂಡ್‌ನವರಾದ ಸಾರಾ ಯಂತನ್ ಅವರು ಮುಂಬೈನಲ್ಲಿ ಚಲನಚಿತ್ರಗಳು, ದೂರದರ್ಶನ ಮತ್ತು ವೆಬ್ ಸರಣಿಗಳಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಸುಮಾರು ತಿಂಗಳಿಂದ ತಾವು ವಾಸವಾಗಿದ್ದ ಫ್ಲಾಟ್ನ ಬಾಡಿಗೆ ಕಟ್ಟದೇ ಇದ್ದ ಹಿನ್ನೆಲೆ ಬಾಡಿಗೆ ವಸೂಲಿ ಮಾಡಲೆಂದು ಏಜೆಂಟ್ ಸೋಮವಾರ ಸಾರಾ ಅವರ ಮನೆಗೆ ಹೋಗಿದ್ದರು. ಈ ವೇಳೆ, ಮನೆ ಬಾಗಿಲು ತೆರೆಯದೇ ಇದ್ದುದ್ದರಿಂದ ಅನುಮಾನಗೊಂಡ ಏಜೆಂಟ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಸಾರಾ ಶವ ಬೆಡ್ ರೂಂನಲ್ಲಿ ರಕ್ತದ ಮಡುವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಆಕೆಯ ಎರಡೂ ಕೈಗಳಲ್ಲಿ ಕೊಯ್ದಿರುವ ಗುರುತುಗಳನ್ನು ಸಹ ಪೊಲೀಸರು ಪತ್ತೆ ಮಾಡಿದ್ದಾರೆ. ಬಳಿಕ ಶವ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬಳಿಕ ಮಂಗಳವಾರದಂದು ಸಾರಾ ಅವರ ತಾಯಿ ರೋಸಿ ಶವವನ್ನು ಹಸ್ತಾಂತರಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಸಿ, ತನ್ನ ಮಗಳು ಇತ್ತೀಚೆಗೆ ಬ್ಯಾಂಕರ್ ಒಬ್ಬರೊಂದಿಗೆ ಸಂಬಂಧದಲ್ಲಿದ್ದರು. ಬ್ಯಾಂಕರ್ ಬಾಯ್ ಫ್ರೆಂಡ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನೆಂದು ತನ್ನೊಂದಿಗೆ ಹೇಳಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಯಾರೋ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ರೋಸಿ ಆರೋಪಿಸಿದ್ದು, ಕೂಡಲೇ ಪೊಲೀಸರು ಸೂಕ್ತ ತನಿಖೆ ನಡೆಸಿ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ವರದಿ ಬಂದನಂತರವಷ್ಟೇ ಆತ್ಮಹತ್ಯೆಯೋ ಅಥವಾ ಕೊಲೆಯಾ ಎಂಬುದು ಸ್ಪಷ್ಟವಾಗಲಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸಾರಾ ಯಂತನ್ ಸುಮಾರು ತಿಂಗಳಿಂದ ಮನೆ ಬಾಡಿಗೆ ಕಟ್ಟದೇ ಇರುವುದರಿಂದ ಬಾಡಿಗೆ ಬಾಕಿ ಹೆಚ್ಚಾಗಿದ್ದರಿಂದ ಏಜೆಂಟ್ ವಸೂಲಿಗಾಗಿ ತೆರಳಿದ್ದಾರೆ. ಸುಮಾರು ಬಾರಿ ಬೆಲ್ ಮಾಡಿದರೂ ಮನೆ ಬಾಗಿಲು ತೆರೆಯದ ಹಿನ್ನೆಲೆ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಾಗಿಲು ಒಡದು ನೋಡಿದಾಗ ರಕ್ತದ ಮಡುವಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾರಾ ಯಂತನ್ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಂತರ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:'ಹನುಮಂತ ದೇವರಲ್ಲ': ಪೊಲೀಸರ ಭದ್ರತೆಯಲ್ಲಿರುವಾಗ ಆದಿಪುರುಷ್ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಹೇಳಿಕೆ