ದಕ್ಷಿಣ ಭಾರತದ ಜನರಿಗೆ ಸಿನಿಮಾ ಕ್ರೇಜ್ ತುಸು ಹೆಚ್ಚೇ ಇದೆ. ಭಾಷೆ ಯಾವುದೇ ಆಗಿರಲಿ, ತುಂಬಾ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಆದರೆ, ಬಾಲಿವುಡ್ ಸಿನಿಮಾಗಳಿಗೆ ಇಲ್ಲಿ ಬೇಡಿಕೆ ತುಸು ಕಡಿಮೆ ಎಂದೇ ಹೇಳಬಹುದು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳನ್ನು ವೀಕ್ಷಿಸುವಷ್ಟು, ಹಿಂದಿ ಸಿನಿಮಾಗಳನ್ನು ಇಲ್ಲಿನ ಜನರು ನೋಡುವುದಿಲ್ಲ. ಅಲ್ಲದೇ, ಇತ್ತೀಚೆಗಿನ ಕೆಲವು ವರ್ಷಗಳಿಂದ ಹೆಚ್ಚು ಸೌತ್ ಸಿನಿಮಾಗಳೇ ದೇಶ ಮಾತ್ರವಲ್ಲದೇ ವಿದೇಶಾದ್ಯಂತ ಸದ್ದು ಮಾಡುತ್ತಿದೆ. ಬಿ-ಟೌನ್ನಿಂದ ಉತ್ತಮ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಈ ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಸಿನಿಮಾವೊಂದು ದಕ್ಷಿಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಸೌತ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ತಮಿಳಿನ ಯುವ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಸೆಪ್ಟೆಂಬರ್ 7ರಂದು ತೆರೆ ಕಂಡು, ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸನ್ನು ಪಡೆದುಕೊಂಡಿದೆ. ವಿಶ್ವದಾದ್ಯಂತ 1069.85 ಕೋಟಿ ರೂ. ಮತ್ತು ಭಾರತದಲ್ಲಿ 640.42 ಕೋಟಿ ರೂ. ಗಳಿಸಿದೆ. ಅದರಲ್ಲಿ ಸುಮಾರು 200 ಕೋಟಿ ರೂಪಾಯಿ ಸೌತ್ನಿಂದಲೇ ಕಲೆಕ್ಷನ್ ಆಗಿದೆ.
ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾರಂತಹ ಸೌತ್ ಸೂಪರ್ಸ್ಟಾರ್ ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರಕ್ಕೆ ಇಷ್ಟೊಂದು ಕಲೆಕ್ಷನ್ ತಂದಿರುವ ಸೌತ್ ಪ್ರೇಕ್ಷಕರು ಎರಡು ಇಂಡಸ್ಟ್ರಿಗಳ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದ್ದಾರೆ ಅನ್ನೋದು ಹಲವು ಚಿತ್ರ ವಿಶ್ಲೇಷಕರ ಅಭಿಪ್ರಾಯ.