ರಿಷಿಕೇಶ್ (ಉತ್ತರಾಖಂಡ್) ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಮಾನುಷಿ ಛಿಲ್ಲರ್ ಅವರು ರಿಷಿಕೇಶ್ ಪರಮಾರ್ಥ ನಿಕೇತನಕ್ಕೆ ಭೇಟಿ ನೀಡಿ, ನಿಕೇತನ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಅವರ ಆಶೀರ್ವಾದ ಪಡೆದರು. ಈ ವೇಳೆ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರುದ್ರಾಕ್ಷಿ ಗಿಡ ಪಡೆದು, ಗಂಗಾನದಿಯಲ್ಲಿ ಸಮರ್ಪಿಸಿ ನಮಸ್ಕರಿಸಿದರು.
ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರ:ಈ ವೇಳೆ ಸ್ವಾಮಿ ಚಿದಾನಂದ ಸರಸ್ವತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಅಗತ್ಯವಿದೆ., ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಸ್ವತಂತ್ರವಾಗಿ ಹಾರಲು ತೆರೆದ ಆಕಾಶ ಇರಬೇಕು. ಭಾರತದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಿದ್ದು, ಈ ಕೂಡುಗೆಯನ್ನು ನಿರ್ಲಕ್ಷಿಸುವುದು ಸಮಂಜಸವಲ್ಲ ಎಂದು ಹೇಳಿದರು.
ಸಮಾನತೆ ಇರುವಲ್ಲಿ ಪ್ರಗತಿ ಸುಲಭ :ನಟಿ ಮಾನುಷಿ ಛಿಲ್ಲರ್ ಮಾತನಾಡಿ, ಮಗ ಮತ್ತು ಮಗಳು ಇಬ್ಬರೂ ಸಮಾನವಾಗಿ ಸಮಾಜದ ಅವಿಭಾಜ್ಯ ಅಂಗಗಳಿದ್ದಂತೆ. ಸಮಾಜದ ಪ್ರಗತಿಯಲ್ಲಿ ಇಬ್ಬರ ಸಮಾನ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಸಮಾನತೆಯನ್ನು ಪ್ರತಿಪಾದಿಸಿದರು.