ಕನ್ನಡ ಚಿತ್ರಗಳಿಗೆ ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದ್ಯಾಂತ ಬೇಡಿಕೆ ಹೆಚ್ಚಾಗುತ್ತಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿವೆ. ಅದ್ದೂರಿ ಮೇಕಿಂಗ್ ಹಾಗು ಒಳ್ಳೆ ಕಂಟೆಂಟ್‌ನೊಂದಿಗೆ ಕನ್ನಡ ಚಿತ್ರಗಳು ಯಾವ ಭಾಷೆಗೂ ಕಮ್ಮಿ ಇಲ್ಲ ಎಂಬ ಮಟ್ಟಿಗೆ ನಿರ್ಮಾಣ ಆಗುತ್ತಿವೆ. ಹೀಗಾಗಿ ಪರಭಾಷೆಯ ನಟರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ಸ್ಯಾಂಡಲ್ ವುಡ್ ಕಡೆಗೆ ಮುಖ ಮಾಡುತ್ತಿದ್ದಾರೆ. ಇದೀಗ ಚಿತ್ರದ ಟೈಟಲ್‌ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಧ್ರುವ ಸರ್ಜಾ ಅಭಿನಯದ ಹಾಗು ನಿರ್ದೇಶಕ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಅಡ್ಡಕ್ಕೆ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಯ ಆಗಮನವಾಗಿದೆ.
ಈಗಾಗ್ಲೇ ಕೆಡಿ ಅಡ್ಡದಲ್ಲಿ ಬಾಲಿವುಡ್ನ ಖಳನಾಯಕ ಸಂಜಯ್ ದತ್ ಒಂದು ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪ್ರೇಮ್, ಸಂಜಯ್ ದತ್ ಆಕ್ಷನ್ ಸಿಕ್ವೇನ್ಸ್ ಹಾಗು ಟಾಕಿ ಪೋಷನ್ ಗಳನ್ನ ಚಿತ್ರೀಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಗುಳಿಕೆನ್ನೆ ಸುಂದರಿ ಶಿಲ್ಪಾ ಶೆಟ್ಟಿ ಕೆಡಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದುಬಂದಿದೆ.
ಹೌದು, ನಿರ್ದೇಶಕ ಪ್ರೇಮ್ ಆಪ್ತರು ಹೇಳುವಂತೆ ನಿರ್ದೇಶಕ ಪ್ರೇಮ್ ಈಗಾಗ್ಲೇ ನಟಿ ಶಿಲ್ಪಾ ಶೆಟ್ಟಿಗೆ ಕಥೆ ಹೇಳಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಕನ್ನಡದಲ್ಲಿ ಮತ್ತೆ ನಟಿಸಲು ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ಶಿಲ್ಪಾ ಶೆಟ್ಟಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರಂತೆ. ಗಾಂಧಿನಗರದ ಮೂಲಗಳ ಪ್ರಕಾರ, ನಿರ್ದೇಶಕ ಪ್ರೇಮ್ 10 ರಿಂದ 20 ದಿನ ಕಾಲ್ ಶೀಟ್ಗೆ 1 ಕೋಟಿ ರೂ ಸಂಭಾವನೆ ಕೊಡಲಾಗಿದೆಯಂತೆ. ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ವಿಶೇಷ ಪಾತ್ರ ಮಾಡಲಿದ್ದಾರೆ. ಅವರು ಸಂಜಯ್ ದತ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಥವಾ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರಾ ಅನ್ನೋದು ಕುತೂಹಲ ಮೂಡಿಸಿದೆ.