ಬಾಲಿವುಡ್ ನಟಿ ಬಿಪಾಶಾ ಬಸು ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. 44 ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಮಾದಕ ನೋಟದ ನಟಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ವರ್ಷ ಬಿಪಾಶಾ ಬಸು ತಮ್ಮ ಪುತ್ರಿಯೊಂದಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರೋದು ವಿಶೇಷ.
ಕರಣ್ ಸಿಂಗ್ ಗ್ರೋವರ್ ಪೋಸ್ಟ್: ಪತ್ನಿ ಬಿಪಾಶಾ ಬಸು ಜನ್ಮದಿನಕ್ಕೆ ಕರಣ್ ಸಿಂಗ್ ಗ್ರೋವರ್ ವಿಶೇಷವಾಗಿ ಶುಭಕೋರಿದ್ದಾರೆ. ಸುಂದರ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, "ನನ್ನ ಪ್ರಿಯೆ, ನಿಮಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಜೀವನದ ಪ್ರತಿ ಕ್ಷಣವೂ ಸಂತೋಷದಿಂದ ತುಂಬಿರಲಿ. ಪ್ರತಿ ದಿನವೂ ನಿಮ್ಮ ಬೆಳಕು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಲಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಇಡೀ ವರ್ಷದಲ್ಲಿ ಇಂದು ನನಗೆ ಸಂಪೂರ್ಣವಾಗಿ ಅತ್ಯುತ್ತಮ ದಿನವಾಗಿದೆ. ನಾನು ಹೇಳಲು ಸಾಧ್ಯವಾಗುವುದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಬೇಬಿ ಪ್ರಿಯೆ, ನೀನೇ ನನ್ನ ಸರ್ವಸ್ವ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಈ ಜೋಡಿಯ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ನಟಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಬಿಪಾಶಾ ಬಸು ಕೂಡ ಪ್ರತಿಕ್ರಿಯಿಸಿದ್ದು, "ನೀವು ನನ್ನ ಜೀವನದ ಅತ್ಯಂತ ದೊಡ್ಡ ಉಡುಗೊರೆ ಮತ್ತು ಈಗ ನಮ್ಮ ಹೆಣ್ಣು ಮಗು ದೇವಿ ಕೂಡ. ನನ್ನನ್ನು ತುಂಬಾ ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.
ಮಾಡೆಲಿಂಗ್ ಬಳಿಕ ಸಿನಿರಂಗಕ್ಕೆ ಎಂಟ್ರಿ:ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿ ಯಶಸ್ಸು ಕಂಡ ನಂತರ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಯಶಸ್ವಿ ನಟಿಯಾಗಿ ಹೊರಹೊಮ್ಮಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೆಹಲಿ ಮೂಲದ ಬಿಪಾಶಾ ಬಸು ಬೆಳೆದದ್ದು ಕೋಲ್ಕತ್ತಾದಲ್ಲಿ. 1996ರಲ್ಲಿ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದು ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಕೃಷ್ಣ ಸುಂದರಿಯಾದ ಇವರು ಆರಂಭದಲ್ಲಿ ಸ್ವಲ್ಪ ಟೀಕೆಗಳಿಗೆ ಒಳಗಾದರು. ಆದರೆ ಬಳಿಕ ಅವರ ಸಿನಿ ಜರ್ನಿ ಸಕ್ಸಸ್ ಮಾತ್ರ ರೋಮಾಂಚಕ.
ಸುಮಾರು 50 ಸಿನಿಮಾಗಳಲ್ಲಿ ನಟನೆ: 2001ರಲ್ಲಿ ಅಜನಬಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಈ ಸಿನಿಮಾದ ನೆಗಟಿವ್ ರೋಲ್ಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಗೆದ್ದರು. ಬಳಿಕ ಹಾರರ್, ಥ್ರಿಲ್ಲರ್ ಚಿತ್ರಗಳಲ್ಲಿ ಅಭಿನಯಿಸಿದರು. ಇವರ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.