ಮುಂಬೈ: ಮುನ್ನಾ ಬಾಯ್ ಎಂಬಿಬಿಎಸ್ ಮೂಲಕ ಅಭಿಮಾನಿಗಳನ್ನು ಸೆಳೆದ ಬಾಲಿವುಡ್ನ ಖ್ಯಾತ ಪೋಷಕ ನಟರಲ್ಲಿ ಒಬ್ಬರಾಗಿರುವ ಅರ್ಷದ್ ವಾರ್ಸಿ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರ್ಷದ್ ವಾರ್ಸಿ ಮತ್ತು ಅವರ ಹೆಂಡತಿ ಮಾರಿಯಾ ಗೊರೆಟ್ಟಿಗೆ ಸೆಬಿ ನಿರ್ಬಂಧ ವಿಧಿಸಿದೆ. ಅರ್ಷದ್ ವಾರ್ಸಿ, ಮರಿಯಾ ಜೊತೆಗೆ ಯೂಟ್ಯೂಬರ್ ಮನೀಶ್ ಮಿಶ್ರಾ ಮತ್ತು ಸಾಧಾನ ಬ್ರಾಡ್ಕಾಸ್ಟ್ನ ಪ್ರೊಮೋಟರ್ ಶ್ರೇಯಾ ಗುಪ್ತಾ, ಗೌರವ್ ಗುಪ್ತಾ, ಸೌರಬ್ ಗುಪ್ತಾ, ಪೂಜಾ ಅಗರ್ವಾಲ್ ಮತ್ತು ವರಣ್ ಮೀಡಿಯಾಗೂ ಕೂಡ ಈ ನಿರ್ಬಂಧ ವಿಧಿಸಲಾಗಿದೆ.
ಯೂಟ್ಯೂಬ್ ಮೂಲಕ ಹೂಡಿಕೆದಾರರಿಗೆ ತಪ್ಪು ಮಾಹಿತಿ ಆರೋಫ: ತಮ್ಮ ಷೇರುಗಳನ್ನು ಖರೀದಿಸುವಂತೆ ಹೂಡಿಕೆದಾರರಿಗೆ ಇವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸೆಳೆಯುತ್ತಿದ್ದರು. ಅಲ್ಲದೇ ಈ ಸಂಬಂಧ ತಪ್ಪು ದಾರಿಗೆ ಎಳೆಯುವ ವಿಡಿಯೋವನ್ನು ಅವರು ಅಪ್ಲೋಡ್ ಮಾಡುತ್ತಿದ್ದರು ಎಂದು ದೂರಲಾಗಿದೆ. ಮಧ್ಯಂತರ ಆದೇಶದ ಅನುಸಾರ, ಅರ್ಷದ್ ವಾರ್ಸಿ 29.34 ಲಕ್ಷ ಮತ್ತು ಮರಿಯಾ 37.56 ಲಕ್ಷ ಆದಾಯವನ್ನು ಗಳಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಘಟನೆ ಸಂಬಂಧ ನಟನ ಸ್ಪಷ್ಟನೆ: ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಟ್ವಿಟರ್ನಲ್ಲಿ ಈ ಕುರಿತು ಸ್ಪಷ್ಟನೆ ನೀಡಲು ಮುಂದಾಗಿರುವ ನಟ, ಇಂತಹ ಸುದ್ದಿಗಳನ್ನು ನಂಬದಂತೆ ತಿಳಿಸಿದ್ದಾರೆ. ಅಲ್ಲದೇ, ಷೇರು ಮಾರುಕಟ್ಟೆ ಬಗ್ಗೆ ತಮಗೂ ಹಾಗೂ ತಮ್ಮ ಹೆಂಡತಿಗೆ ಯಾವುದೇ ಜ್ಞಾನವಿಲ್ಲ ಎಂದಿದ್ದಾರೆ. ನೀವು ಓದುತ್ತಿರುವ ಸುದ್ದಿಗಳ ಬಗ್ಗೆ ನೀವು ನಂಬಬೇಡಿ. ಮರಿಯಾ ಮತ್ತು ನನಗೆ ಷೇರಿನಲ್ಲಿ ಕಿಂಚಿತ್ತು ಜ್ಞಾನವಿಲ್ಲ. ಶಾರ್ದಾ ಮತ್ತು ಇತರ ಷೇರುಗಳ ಹೂಡಿಕೆ ಮಾಡುವ ಮುನ್ನ ಸಲಹೆ ಪಡೆಯಿರಿ. ಕಷ್ಟಪಟ್ಟು ಗಳಿಸಿದ ಹಣವನ್ನು ನಷ್ಟ ಮಾಡಬೇಡಿ ಎಂದು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.