ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್, ಹಿರಿಯ ಪ್ರಖ್ಯಾತ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ 80ನೇ ಹುಟ್ಟುಹಬ್ಬದ ಸಡಗರ. ಕುಟುಂಬಸ್ಥರು, ಆತ್ಮೀಯರು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಅಕ್ಟೋಬರ್ 11, 1942ರಂದು ಅಲಹಾಬಾದ್ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮತ್ತು ಪ್ರಖ್ಯಾತ ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ದಂಪತಿ ಪುತ್ರನಾಗಿ ಜನಿಸಿದರು. 1969ರಲ್ಲಿ ನಟನೆ ಮೂಲಕ ವೃತ್ತಿ ಜೀವನ ಆರಂಭಿಸಿ ಬಹು ಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ಮಿಂಚಿದರು.
ಬಿಗ್ ಬಿ ಒಬ್ಬ ನಟನಷ್ಟೇ ಅಲ್ಲ, ಅವರು ತಮ್ಮ ಹಲವು ಚಲನಚಿತ್ರಗಳಿಗೆ ಹಾಡುಗಳನ್ನೂ ಹಾಡಿದ್ದಾರೆ. ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
1969ರಲ್ಲಿ 'ಸಾತ್ ಹಿಂದುಸ್ತಾನಿ' ಚಿತ್ರದಲ್ಲಿ ಏಳು ಜನ ನಾಯಕರಲ್ಲಿ ತಾವೂ ಸಹ ಒಬ್ಬರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ ಆರಂಭಿಕ ಅವಧಿಯಲ್ಲಿ ಬಚ್ಚನ್ ಅವರ ಅನೇಕ ಚಲನಚಿತ್ರಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ. 1973ರ 'ಜಂಜೀರ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ನಲ್ಲಿ ಮನ್ನಣೆ ಪಡೆದರು. ಈ ಚಿತ್ರದಲ್ಲಿ ಅವರು ಇನ್ಸ್ಪೆಕ್ಟರ್ ವಿಜಯ್ ಖನ್ನಾ ಪಾತ್ರ ನಿರ್ವಹಿಸಿದ್ದರು. ಅಮಿತಾಬ್ ಈ ಚಿತ್ರಕ್ಕಾಗಿ 'ಆಂಗ್ರಿ ಯಂಗ್ ಮ್ಯಾನ್' ಪ್ರಶಸ್ತಿಯನ್ನು ಪಡೆದುಕೊಂಡರು.