ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿರುವ ಮೊದಲ ಸಿನಿಮಾ 'ಅನಿಮಲ್'. ಗ್ಯಾಂಗ್‌ಸ್ಟರ್ ಕಥೆಯನ್ನಾಧರಿಸಿದ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ.
ಬಾಬಿ ಡಿಯೋಲ್ ಫಸ್ಟ್ ಲುಕ್:ಸಿನಿಮಾ ಶೀರ್ಷಿಕೆಯಿಂದಲೇ ಹೆಚ್ಚು ಗಮನ ಸೆಳೆದಿದೆ. ಡಿಫ್ರೆಂಟ್ ಟೈಟಲ್ ಹೊಂದಿರುವ ಈ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಹಂತ ಹಂತವಾಗಿ ಸಿನಿಮಾ ನಟರ ಫಸ್ಟ್ ಲುಕ್ ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡುತ್ತಿದೆ. ನಾಯಕ ನಟ ರಣ್ಬೀರ್ ಕಪೂರ್, ನಾಯಕ ನಟಿ ರಶ್ಮಿಕಾ ಮಂದಣ್ಣ ಮತ್ತು ಪ್ರಮುಖ ಪಾತ್ರ ನಿರ್ವಹಿಸಿರುವ ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ಚಿತ್ರ ತಯಾರಕರೀಗ ಮತ್ತೋರ್ವ ಪ್ರಮುಖ ಪಾತ್ರಧಾರಿ ಬಾಬಿ ಡಿಯೋಲ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ.
'ಅನಿಮಲ್ ಕಾ ಎನಿಮಿ'.... ಅನಿಮಲ್ ಚಿತ್ರತಂಡ ಇಂದು ನಟ ಬಾಬಿ ಡಿಯೋಲ್ ಅವರ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 'ಅನಿಮಲ್ ಕಾ ಎನಿಮಿ' (ಅನಿಮಲ್ ಚಿತ್ರದ ಖಳನಾಯಕ) ಎಂದು ಬಿಂಬಿಸಲಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಬಾಬಿ ರಗಡ್ ಲುಕ್ ಬೀರಿದ್ದಾರೆ. ನೀಲಿ ಸೂಟ್‌ನಲ್ಲಿರುವ ನಟ ಬಾಬಿ ಡಿಯೋಲ್ ಅವರ ಮುಖ ರಕ್ತಸಿಕ್ತವಾಗಿದೆ. ಚಿತ್ರದಲ್ಲಿ ನಟ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.
ಮೊದಲೇ ವರದಿಯಾದಂತೆ, ಅನಿಮಲ್ ಚಿತ್ರತಂಡ ಟೀಸರ್ ಅನ್ನು ಸೆಪ್ಟೆಂಬರ್ 28ಕ್ಕೆ ಅನಾವರಣಗೊಳಿಸಲಿದೆ. ಸೆಪ್ಟೆಂಬರ್ 28 ನಾಯಕ ನಟ ರಣ್ಬೀರ್ ಕಪೂರ್ ಜನ್ಮದಿನ ಹಿನ್ನೆಲೆ ಅಂದು ಚಿತ್ರತಂಡ ಸ್ಪೆಷಲ್ ಗಿಫ್ಟ್ ನೀಡಲಿದೆ. ಇದಕ್ಕೂ ಮುನ್ನ ರಣ್ಬೀರ್ ಅವರ ಉಗ್ರನೋಟವುಳ್ಳ ಪೋಸ್ಟರ್ ಅನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಅಂದಿನಿಂದ ಅಭಿಮಾನಿಗಳು ಮೆಚ್ಚಿನ ನಟನನ್ನು ಗ್ಯಾಂಗ್‌ಸ್ಟರ್ ಅವತಾರದಲ್ಲಿ ವೀಕ್ಷಿಸಲು ಕಾದು ಕುಳಿತಿದ್ದಾರೆ.