ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಂಗೀತ ಮಾಂತ್ರಿಕ ಇಳಯರಾಜ 80ನೇ ವರ್ಷಕ್ಕೆ ಕಾಲಿಟ್ಟರೆ, ಖ್ಯಾತ ನಿರ್ದೇಶಕ ಮಣಿರತ್ನಂ 67ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರು ಚಿತ್ರರಂಗಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಹಲವು ಹಿಟ್ ಸಿನಿಮಾಗಳು ಸೃಷ್ಟಿಯಾಗಿ ಸಂಚಲನ ಮೂಡಿಸಿವೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ಮೇರು ವ್ಯಕ್ತಿಗಳಿಗೆ ತಾರಾ ಗಣ್ಯರು, ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಖ್ಯಾತ ನಟ ಕಮಲ್ ಹಾಸನ್ ಸೇರಿದಂತೆ ಅನೇಕರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಸ್ಟಾಲಿನ್ ಅವರು ಇಳಯರಾಜ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದಾರೆ.
ಟ್ಟಿಟರ್ನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು ಇಳಯರಾಜ ಮತ್ತು ಮಣಿರತ್ನಂ ಅವರಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ. ಇಳಯರಾಜ ಅವರನ್ನು 'ಸಂಗೀತ ಕ್ಷೇತ್ರಕ್ಕೆ ಕ್ರಾಂತಿ' ಎಂದೇ ಸಂಬೋಧಿಸಿದ್ದಾರೆ. ಅವರು ಕೇವಲ ಸಂಗೀತ ವಾದ್ಯಗಳನ್ನು ಸ್ಟಿಂಗ್ ಮಾಡುವುದಿಲ್ಲ. ಜೊತೆಗೆ ನಮ್ಮ ಹೃದಯವನ್ನು ನುಡಿಸುತ್ತಾರೆ ಎಂದು ಹೇಳಿದ್ದಾರೆ.
ಜೊತೆಗೆ "ಭಾರತದ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಜಗತ್ತು ಮೆಚ್ಚುವ ಕಥೆಗಳನ್ನು ರಚಿಸುವುದನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಮಣಿರತ್ನಂ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಮಣಿರತ್ನಂ ಅವರ ಇತ್ತೀಚೆಗಿನ ಪೊನ್ನಿಯನ್ ಸೆಲ್ವನ್ 2 ಚಿತ್ರ ಭಾರೀ ಮೆಚ್ಚುಗೆ ಗಳಿಸಿದೆ.