ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಆಗಾಗ ಪೌರಾಣಿಕ ಚಿತ್ರಗಳು ಸಿನಿಮಾ ಪ್ರೇಕ್ಷಕರನ್ನ ಇಂಪ್ರೇಸ್ ಮಾಡುತ್ತಿವೆ. ಇದೀಗ ವಿರಾಟಪುರ ವಿರಾಗಿ ಸಿನಿಮಾ ಇಂತಹದ್ದೇ ಆಧಾರಿತ ಕಥೆಯನ್ನು ಹೊಂದಿದೆ. ಆಧುನಿಕ ಬಸವಣ್ಣ ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತವಾದ ವಿರಾಟಪುರ ವಿರಾಗಿ ಚಿತ್ರ ನಿರ್ಮಾಣವಾಗಿದ್ದು, ಇದರ ಮೊದಲ ನೋಟ ಇತ್ತೀಚಿಗೆ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಬಿ.ಎಸ್ ಲಿಂಗದೇವರು ನಿರ್ದೇಶಿಸಿದ್ದು, ಸಮಾಧಾನ ತಂಡ ಚಿತ್ರವನ್ನು ನಿರ್ಮಾಣ ಮಾಡಿದೆ. ಇದರ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಶ್ರೀಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಶಿವಮೊಗ್ಗ, ಕರ್ನಾಟಕ ಚಲನಚಿತ್ರ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಿ.ಎಸ್ ಲಿಂಗದೇವರು 'ಎರಡೂವರೆ ವರ್ಷಗಳ ಹಿಂದೆ ಜಡೆ ಮಹಾಸ್ವಾಮಿಗಳು ನನಗೆ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡಲು ಹೇಳಿದರು. ಆನಂತರ ನನ್ನ ಆಪ್ತರ ಬಳಿ ಈ ವಿಷಯವನ್ನು ಸಮಾಲೋಚನೆ ಮಾಡಿದೆ. ಅವರೆಲ್ಲರೂ ನೀವು ಈ ಚಿತ್ರವನ್ನು ನಿರ್ದೇಶನ ಮಾಡಿ ಎಂದು ಧೈರ್ಯ ತುಂಬಿದರು. ನಾನು ನಿರ್ದೇಶನಕ್ಕೆ ಮುಂದಾದೆ. ಅನೇಕ ಮಠಾಧೀಶರನ್ನು ಹಾಗೂ ವಿದ್ವಾಂಸರನ್ನು ಸಂಪರ್ಕಿಸಿ ಸ್ಕ್ರಿಪ್ಟ್ ಸಿದ್ಧ ಮಾಡಿದೆ. ಈ ಚಿತ್ರವನ್ನು ಸಮಾಧಾನ ತಂಡ ನಿರ್ಮಾಣಮಾಡಿದೆ' ಎಂದರು.