ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ 3 ಉಡಾವಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಐತಿಹಾಸಿಕ ದಾಖಲೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಆಗಲಿದೆ. ಈ ಮಿಷನ್ ಯಶಸ್ಸು ಕಾಣಲಿ ಎಂದು ಇಡೀ ಭಾರತೀಯರು ಹಾರೈಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಅನುಪಮ್ ಖೇರ್ ಮತ್ತು ಸುನೀಲ್ ಶೆಟ್ಟಿ ಅವರು ಕೂಡ ಇಸ್ರೋಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.
'ಮತ್ತೊಮ್ಮೆ ಪುಟಿದೇಳುವ ಸಮಯ ಬಂದಿದೆ..'ನಟ ಅಕ್ಷಯ್ ಕುಮಾರ್ ಅವರು 2019 ರಲ್ಲಿ ಚಂದ್ರಯಾನ 2ರ ಉಡಾವಣೆಯ ಸಮಯದಲ್ಲಿ ಪೋಸ್ಟ್ ಮಾಡಿದ್ದ ಹಿಂದಿನ ಟ್ವೀಟ್ ಅನ್ನು ಮರುಹಂಚಿಕೊಂಡಿದ್ದಾರೆ. "ಮತ್ತೊಮ್ಮೆ ಪುಟಿದೇಳುವ ಸಮಯ ಬಂದಿದೆ. ಚಂದ್ರಯಾನ 3ಗಾಗಿ ಶ್ರಮಿಸಿದ ಎಲ್ಲಾ ವಿಜ್ಞಾನಿಗೆ ಆಲ್ ದಿ ಬೆಸ್ಟ್. ಕೋಟ್ಯಾಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ" ಎಂದು ಟ್ವೀಟ್ ಮಾಡಿ ಇಸ್ರೋಗೆ ಶುಭಹಾರೈಸಿದ್ದಾರೆ.
'ನಮ್ಮ ಧ್ವಜವು ಎತ್ತರಕ್ಕೆ ಏರಲಿ': "ಭಾರತವು ತನ್ನ ಮೂರನೇ ಚಂದ್ರಯಾನಕ್ಕೆ ಸಿದ್ಧವಾಗಿದೆ. ಚಂದ್ರಯಾನ 3ರ ಉಡಾವಣೆಯೊಂದಿಗೆ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸುತ್ತೇನೆ. ನಮ್ಮ ಧ್ವಜವು ಎತ್ತರಕ್ಕೆ ಏರಲಿ (ಝಂಡಾ ಊಂಚಾ ರಹೇ ಹಮಾರಾ) ಜೈ ಹಿಂದ್..." ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ
ಇದಲ್ಲದೇ, ಸುನೀಲ್ ಶೆಟ್ಟಿ ಅವರು ಚಂದ್ರಯಾನ 3ರ ಫೋಟೋವನ್ನು ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. "ಉತ್ಸಾಹದ ಮಟ್ಟ ಚಂದ್ರನನ್ನು ತಲುಪುತ್ತಿವೆ! ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಶುಭಹಾರೈಸುತ್ತೇನೆ. ಭಾರತದ ತಾಂತ್ರಿಕ ಸಾಮರ್ಥ್ಯವು ಹೊಸ ಎತ್ತರಕ್ಕೆ ಏರುವುದನ್ನು ನೋಡಲು ಇನ್ನು ಕಾಯಲು ಸಾಧ್ಯವಿಲ್ಲ. ಪ್ರಯಾಣವು ಸುಲಭವಾಗಲಿ, ಆವಿಷ್ಕಾರಗಳು ಮನಸ್ಸಿಗೆ ಮುದ ನೀಡಲಿ, ಮತ್ತು ಯಶಸ್ಸು ಅದ್ಭುತವಾಗಿರಲಿ! ಹೆಮ್ಮೆಯ ಭಾರತೀಯ" ಎಂದು ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಬೆಸ್ಟ್ ವಿಶಸ್ ತಿಳಿಸಿದ್ದಾರೆ.
ಚಂದ್ರಯಾನ 3 ಉದ್ದೇಶಗಳು ಹೀಗಿವೆ..ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದು. ಚಂದ್ರನ ಮೇಲೆ ರೋವರ್ ಇಳಿಸುವುದು ಮತ್ತು ಆ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಮಿಷನ್ನ ಪ್ರಮುಖ ಉದ್ದೇಶವಾಗಿದೆ.
VM3 M4 ರಾಕೆಟ್‌ನ ಸಾಮರ್ಥ್ಯ: ಇದು 640 ಟನ್ ತೂಕವುಳ್ಳ ದೇಶದ ಅತ್ಯಂತ ಭಾರವಾದ ರಾಕೆಟ್ ಆಗಿದೆ. ಇದರ ಒಟ್ಟು ಉದ್ದ 43.5 ಮೀಟರ್. 8 ಟನ್ ಪೇಲೋಡನ್ನು ಭೂಮಿಯಿಂದ 200 ಕಿಲೋ ಮೀಟರ್ ಎತ್ತರಕ್ಕೆ ಹೊತ್ತೊಯ್ಯಬಲ್ಲದು. ಇಲ್ಲಿಯವರೆಗೆ, ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿವೆ. ಇದೀಗ, ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲು ಭಾರತ ಸಿದ್ಧವಾಗಿದೆ.
ಇದನ್ನೂ ಓದಿ:Chandrayaan-3: ವಿಕ್ರಮ ಹಾದಿ ತಪ್ಪದಂತೆ ಈ ಬಾರಿ ನವೀನ ತಂತ್ರಜ್ಞಾನ ಅಳವಡಿಕೆ.. ಇಲ್ಲಿದೆ ಫುಲ್ ಡಿಟೇಲ್ಸ್