ವಿಕ್ರಾಂತ್ ರೋಣ ಸಿನಿಮಾ ಬಳಿಕ ಅಭಿನಯ ಚಕ್ರವರ್ತಿ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವ ಪ್ರೊಡಕ್ಷನ್ ಸಂಸ್ಥೆ ಜೊತೆಗೆ? ಅನ್ನೋದು ಸುದೀಪ್ ಅವರ ಜೆ.ಪಿ ನಗರದ ನಿವಾಸದಿಂದ ಹಿಡಿದು ಸೌತ್ ಸಿನಿಮಾ ಇಂಡಸ್ಟ್ರಿವರೆಗೂ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಕಿಚ್ಚ ಸುದೀಪ್ ಕೆಸಿಸಿ ಕ್ರಿಕೆಟ್ ಮ್ಯಾಚ್ ಮುಗಿಸಿ, ಇದೀಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕ್ರಿಕೆಟ್ ಮ್ಯಾಚ್ ಮುಗಿಯುತ್ತಿದ್ದಂತೆ ಸುದೀಪ್ ಮುಂದಿನ ನಡೆ ಏನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಈ ಪ್ರಶ್ನೆಗೆ ನಿರ್ದೇಶಕ ಅನೂಪ್ ಸಣ್ಣ ಸುಳಿವು ನೀಡಿದ್ದಾರೆ.
ಹೌದು, ವಿಕ್ರಾಂತ್ ರೋಣ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಿಚ್ಚ ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡೋದು ಫಿಕ್ಸ್ ಅಂತಾ ಹೇಳುವ ಮೂಲಕ ಹೊಸ ಅಪ್ಡೇಟ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹಾಗೂ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿ ಮೇಕಿಂಗ್ನಿಂದ ಕೂಡಿತ್ತು. ಕಥೆ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯಿಂದ ಚಿತ್ರ ಸದ್ದು ಮಾಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಮೇಕಿಂಗ್ ಸ್ಟೈಲ್ ಹಾಗೂ ಥ್ರಿಲ್ಲರ್ ಕಥೆಯನ್ನು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಈ ಹಿನ್ನೆಲೆ, ಕಿಚ್ಚ ಸುದೀಪ್ ಅವರಿಗೆ ಮತ್ತೆ ಆ್ಯಕ್ಷನ್ ಕಟ್ ಹೇಳುವುದಾಗಿ ಅನೂಪ್ ಭಂಡಾರಿ ಕೆಲ ಸಂದರ್ಶನದಲ್ಲಿ ಹೇಳಿದ್ದರು. ಈಗ ಆ ಮಾತು ನಿಜವಾಗುವಂತೆ ಕಾಣುತ್ತಿದೆ.
ಬಿಲ್ಲ ರಂಗ ಭಾಷ ಸಿನಿಮಾ ಪಕ್ಕಾ ಮಾಸ್ ಎಂಟರ್‌ಟೈನ್ಮೆಂಟ್ ಚಿತ್ರ. ಪ್ರಾಚೀನ ಕಾಲದ ರಾಜನೊಬ್ಬನ ಕಥೆಯಾಗಿದ್ದು, ಚಿತ್ರದಲ್ಲಿ ಸುದೀಪ್ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅನೂಪ್ ಈ ಕಥೆಯನ್ನು 18 ವರ್ಷಗಳ ಹಿಂದೆಯೇ ಸಿದ್ಧ ಮಾಡಿಕೊಂಡಿದ್ದರಂತೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರ ಬ್ಯಾನರ್ ಸುಪ್ರಿಯಾನ್ವಿ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಲು ಈ ಹಿಂದೆ ಮಾತುಕಥೆ ಆಗಿದೆ.