ಅಭಿನಯ ಚಕ್ರವರ್ತಿ ನಿರೂಪಣೆಯ 'ಕನ್ನಡ ಬಿಗ್ ಬಾಸ್' ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೆಷ್ಟೋ ಮಂದಿ ಕನ್ನಡಿಗರ ಮನೆ ಮಾತಾಗೋದುಂಟು. ಅಷ್ಟೇ ಏಕೆ? ಹಲವು ಸ್ಪರ್ಧಿಗಳ ನಸೀಬೂ ಬದಲಾಗಿದೆ.
ರಿಯಾಲಿಟಿ ಶೋನಿಂದ ಜನಪ್ರಿಯರಾಗಿ ಸಿನಿಮಾ ಇಂಡಸ್ಟ್ರಿಗೆ ಬರೋದು ಹೊಸತೇನಲ್ಲ. ಈಗಾಗಲೇ ಸಾಕಷ್ಟು ಬಿಗ್ ಬಾಸ್ ಶೋ ಸ್ಪರ್ಧಿಗಳು ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರಿಗೆ ಯಶಸ್ಸು ಸಿಕ್ಕಿದ್ರೆ ಮತ್ತೆ ಕೆಲವರು ಸೈಲೆಂಟ್ ಆಗಿ ತೆರೆಮರೆಗೆ ಸರಿದುಬಿಡುತ್ತಾರೆ. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ 'ಪ್ರೇಮಿಗಳ ಗಮನಕ್ಕೆ' ಎಂಬ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಲಿವಿಂಗ್ ಟುಗೆದರ್ ರಿಲೇಶನ್ ಶಿಪ್:ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಯುವಜನತೆಯಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಅದರಲ್ಲೂ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆ ಮಾಡಿಕೊಳ್ಳದೇ ಒಂದೇ ಮನೆಯಲ್ಲಿ ಅನ್ಯೋನ್ಯತೆಯಿಂದ ವಾಸವಾಗಿರುವ ಸಂಬಂಧವನ್ನು ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಇಂಥದೇ ಸಂಬಂಧದ ಮೇಲೆ ಹೆಣೆಯಲಾದ ಕಥೆಯಿರುವ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಪ್ರೇಮಿಗಳ ಗಮನಕ್ಕೆ ಎಂಬ ಶೀರ್ಷಿಕೆಯುಳ್ಳ ಚಿತ್ರ ಇದೇ ಸಾಲಿನಲ್ಲಿ ಬಿಡುಗಡೆ ಆಗಲಿದೆ.
ಕೋವಿಡ್ ಸಂದರ್ಭದಲ್ಲಿ ದೇಶವೇ ಲಾಕ್‌ಡೌನ್ ಆಗಿ ಹೊರಗೆ ಎಲ್ಲೂ ಹೋಗದಂತಹ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟವು. ಅದರಂತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ (ಈ ಚಿತ್ರದ ನಾಯಕ, ನಾಯಕಿ) ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಅವರಿಗೆ ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸಿದರು ಎಂಬುದೇ ಚಿತ್ರದ ಹೂರಣ.