ವೀಕೆಂಡ್ ಬಂತೆಂದರೆ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಮತ್ತಷ್ಟು ಏರುತ್ತದೆ. ಏಕೆಂದರೆ, ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಸಪರೇಟ್ ಫ್ಯಾನ್ಸ್ ಬೇಸ್ ಇದೆ. ಶನಿವಾರ ಮತ್ತು ಭಾನುವಾರ ನಿರೂಪಕ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟು, ಒಬ್ಬರನ್ನು ಎಲಿಮಿನೇಟ್ ಮಾಡುತ್ತಾರೆ. ಅತಿ ಹೆಚ್ಚು ಮತಗಳನ್ನು ಪಡೆದವರು ಮುಂದಿನ ವಾರಕ್ಕೆ ಪ್ರವೇಶ ಪಡೆದು, ಕಡಿಮೆ ಮತ ಗಳಿಸಿದವರು ಮನೆಯಿಂದ ಹೊರಬರುತ್ತಾರೆ. ಇಂದು ಕಿಚ್ಚನ ಪಂಚಾಯಿತಿ ನಡೆಯಲಿದ್ದು, ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ಪ್ರೋಮೋ ವೀಕ್ಷಿಸಿದವರು ಸಂಪೂರ್ಣ ಸಂಚಿಕೆ ವೀಕ್ಷಿಸುವ ಕಾತರ ವ್ಯಕ್ತಪಡಿಸಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ:ಬಿಗ್ ಬಾಸ್ ಕನ್ನಡ ಸೀಸ್ 10 ಆರಂಭವಾದಾಗಿನಿಂದಲೂ ಸಂಗೀತಾ, ಕಾರ್ತಿಕ್, ತನಿಷಾ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಪ್ರತೀ ಹಂತದಲ್ಲೂ ಹೆಗಲಿಗೆ ಹೆಗಲು ಕೊಟ್ಟು ಗೆಳೆತನ ಅಂದ್ರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿದ್ದರು. ಆದರೆ ಕಳೆದ ಎರಡು ವಾರಗಳಲ್ಲಿ ಎಲ್ಲವೂ ಬದಲಾದಂತಿದೆ. ಸ್ನೇಹದಲ್ಲಿ ಬಿರುಕು ಮೂಡಿದಂತೆ ತೋರುತ್ತಿದೆ. ಸಂಗೀತಾ ತಂಡದಿಂದ ಹೊರಬಂದಿದ್ದು, ಸದ್ಯ ಕಾರ್ತಿಕ್ ಮತ್ತು ತನಿಷಾ ಮಾತ್ರ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಈ ವಿಚಾರವೇ ಇಂದಿನ ಸಂಚಿಕೆಯ ಚರ್ಚೆಯ ವಿಷಯ. ''ಒಂದೇ ರಾತ್ರಿಯಲ್ಲಿ ಬದಲಾಗಿದ್ದೇನು?, ಅನುಬಂಧವೋ, ಆಟವೋ?'' ಎಂಬ ಶೀರ್ಷಿಕೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ನಾಮಿನೇಷನ್ನಲ್ಲಿ ಸೇಫ್ ಮಾಡೋ ಅವಕಾಶ ಇದ್ರೂ ಸೇಫ್ ಮಾಡಲಿಲ್ಲ ಎಂಬ ಕಾರಣಕ್ಕೆ ತನಿಷಾ, ಕಾರ್ತಿಕ್ ಅವರಿಂದ ಸಂಗೀತಾ ಕೊಂಚ ದೂರವಾಗಿದ್ದರು. ಈ ವಾರ ವಿನಯ್ ತಂಡದಲ್ಲಿ ಸಂಗೀತಾ ಆಟವಾಡಿದ್ದಾರೆ. ಈವರೆಗೂ ವಿನಯ್ ಅಂದ್ರೆ ಆಗಲ್ಲ ಅನ್ನೋ ರೀತಿಯೇ ಸಂಗೀತಾ ವರ್ತಿಸಿದ್ದರು. ಆದ್ರೀಗ ವಿನಯ್ ಕಡೆ ವಾಲಿದ್ದಾರೆ. ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದ ಕಾರ್ತಿಕ್ ಅವರಿಂದ ಕೊಂಚ ದೂರ ಸರಿದಿದ್ದಾರೆ.