ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್‌ನ ಮೊದಲ ವೀಕೆಂಡ್ ಶೋ ನಡೆದಿದೆ. ಕಲರ್ಸ್ ಕನ್ನಡ ಮತ್ತು ಜಿಯೋ ಸಿನಿಮಾಗಳಲ್ಲಿ ಏಕಕಾಲದಲ್ಲಿ ಪ್ರಸಾರವಾದ 'ಕಿಚ್ಚನ ಪಂಚಾಯಿತಿ'ಯಲ್ಲಿ ಹಲವು ವಿಚಾರಗಳ ಚರ್ಚೆ ನಡೆದಿದೆ. ಹ್ಯಾಂಡ್‌ಸಮ್ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಸ್ಪರ್ಧಿಗಳಿಗೆ ಕಿವಿಮಾತನ್ನೂ ಹೇಳಿದ್ದಾರೆ. ಸ್ಪರ್ಧಿಗಳ ಸ್ಟ್ರೆಂತ್, ವೀಕ್‌ನೆಸ್, ಮನೆಯಲ್ಲಿ ನಡೆದ ಸರಿ ತಪ್ಪು, ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ನಗಿಸಿದರು, ಕಾಲೆಳೆದರು, ಜೊತೆಗೆ ತಪ್ಪುಗಳನ್ನು ಸೂಚ್ಯವಾಗಿಯೇ ತಿದ್ದಿದರು. ಬಿಗ್ ಬಾಸ್ ರೂಲ್ಸ್ ಬಗ್ಗೆಯೂ ಎಚ್ಚರಿಸಿದರು.
ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿ, ಅನುಭಗಳನ್ನು ಕೇಳಿದರು. ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು. ನಿಮಗೆ ನೀವೇ ಹತ್ತರಲ್ಲಿ ಎಷ್ಟು ಅಂಕಗಳನ್ನು ಕೊಟ್ಟುಕೊಳ್ಳುತ್ತೀರಿ? ಎಂದೂ ಸಹ ಕೇಳಿದರು. ಕ್ಯಾಪ್ಟನ್ಸಿಯ ಕೊರತೆಗಳನ್ನು ಸ್ಪರ್ಧಿಗಳ ಬಾಯಿಂದಲೇ ಹೇಳಿಸಿದರು. ಮನೆಯೊಳಗಿನ ಹುಡುಗಿಯರು ತುಕಾಲಿ ಸಂತೋಷ್ ಅವರಿಗೆ ಬೆಸ್ಟ್ ತಂಗಿಯಾಗುವ ಆಸೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಇವರಿಂದ ಅಣ್ಣ ಅನ್ನಿಸಿಕೊಳ್ಳೋದಕ್ಕಿಂತ ವಾರಪೂರ್ತಿ ಪಾತ್ರೆ ತೊಳೆಯುತ್ತೇನೆ ಎಂದು ತುಕಾಲಿ ಅವರು ತಮಾಷೆಯಾಗಿ ಹೇಳಿದ ಮಾತಿಗೆ ಕಿಚ್ಚ ಅಸ್ತು ಅಂದುಬಿಟ್ಟರು.
ನಂತರ ಕಿಚ್ಚನ ಮಾತು ಸಾಗಿದ್ದು ನಾಮಿನೇಷನ್ ಎಂಬ ಅಗ್ನಿಪರೀಕ್ಷೆಗೆ. ಕಳೆದ ವಾರ ಪ್ರಾರಂಭದ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶ್ಯಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿಟ್ಟಿದ್ರು. ನಿನ್ನೆಯ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್ ಅತಿ ಹೆಚ್ಚು ಮತ ಪಡೆದು ಸಮರ್ಥರ ಗುಂಪಿಗೆ ಸೇರಿ ಸೇಫ್ ಆದರು. ನಂತರ ಸೇಫ್ ಆಗಿದ್ದು ತನಿಷಾ. ಉಳಿದ ನಾಲ್ವರು ಅಸಮರ್ಥರು ಟೆನ್ಷನ್‌ನಲ್ಲಿಯೇ ಕೂರುವಂತಾಯ್ತು. ಏಕಂದ್ರೆ ಆ ಸಂದರ್ಭ ಕಿಚ್ಚ ಮಾತನ್ನು ಬೇರೆ ಕಡೆಗೆ ಹೊರಳಿಸಿದರು.
ಮನೆಯೊಳಗಿನ ವಿದ್ಯಮಾನಗಳ ಕುರಿತು ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡರು. ಮನೆಯೊಳಗೆ ಬಂದ ಲಾರ್ಡ್ ಪ್ರಥಮ್ ಅವರಿಗೆ ಪೂರ್ತಿಯಾಗಿ ಸರೆಂಡರ್ ಆದ ಬಗ್ಗೆ ಪ್ರಶ್ನಿಸಿದರು. ಬಿಗ್ ಬಾಸ್ ಯಾವುದೇ ಸೂಚನೆಯನ್ನೂ ಕೊಡದೇ ನೀವೆಲ್ಲ ಏಕೆ ಅವರು ಹೇಳಿದ್ದನ್ನೆಲ್ಲ ಮಾಡಿದಿರಿ?, ಅವರನ್ನು ಒಪ್ಪಿಕೊಂಡಿರಿ?, ಎಂಬ ಕಿಚ್ಚನ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ.
ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮ್ಯಾಟಿಕ್ ಯಾರು? ಇನೋಸೆಂಟ್ ಯಾರು? ಎಂಬ ಪ್ರಶ್ನೆಗಳು ಕಿಚ್ಚ ಅವರಿಂದ ತೂರಿಬಂದವು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು.
ನಂತರ ಮಾತು ಡ್ರೋನ್ ಪ್ರತಾಪ್ ಅವರ ಬಗ್ಗೆ ಸಾಗಿತು. ಸುದೀಪ್ ಈ ಮಾತುಕತೆ ಶುರುಮಾಡಿದ್ದು ಒಂದು ಕಥೆಯ ಜೊತೆಗೆ. ಒಬ್ಬ ತಪ್ಪಿತಸ್ಥ ತಪ್ಪು ಮಾಡಿದ್ದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರುತಿಸುತ್ತದೆ. ಭಗವಂತ ಕ್ಷಮಿಸಿದವರನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ ಎಂದರು. ಕಥೆ ಹೇಳಿದ ಸುದೀಪ್ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತ್ತು. ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋನ್ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗಲೆಲ್ಲಾ, ಅವಕಾಶವಾದಾಗಲೆಲ್ಲಾ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು.