ಬಿಗ್ ಬಾಸ್ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿದೆ. ತಂಡ ರಚನೆಯಲ್ಲಿ ಗೌಪ್ಯವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ. ಇದರ ಝಲಕ್ ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಜಾಹೀರಾಗಿದೆ. 'ಆಟದಲ್ಲಿ ಸಂಗೀತಾ ಹಾಗೂ ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್?' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರಿಗೆ ಬಿಗ್ ಬಾಸ್ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರ ಪೈಕಿ ತಲಾ ಮೂವರರನ್ನು ಖರೀದಿಸಬೇಕು ಎಂದು ಕ್ಯಾಪ್ಟನ್ಗಳಿಗೆ ಬಿಗ್ ಬಾಸ್ ಹೇಳಿದ್ದಾರೆ. ಹೀಗೆ ಬಿಡ್ಡಿಂಗ್ ಭರಾಟೆ ಆರಂಭಗೊಂಡಿದೆ. ಕಾರ್ತಿಕ್ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ. ಅಷ್ಟೇ ಅಲ್ಲ, ತನಿಷಾ 'ನನ್ನ ಕಳಪೆ ಖರೀದಿ ಕಾರ್ತಿಕ್' ಎಂದು ಹೇಳಿ ಅಚ್ಚರಿ ಮೂಡಿಸಿದರು.
ಈ ಕ್ಷಣಗಳಿಗೆ ಸಾಕ್ಷಿಯಾದ ಸಹಸ್ಪರ್ಧಿ ತುಕಾಲಿ ಸಂತೋಷ್, 'ಅವನಿಗೋಸ್ಕರ ಗುದ್ದಾಡಿದ್ದ ಅದೇ ಫ್ರೆಂಡ್ಸು ಅವನನ್ನು ಹತ್ ರೂಪಾಯಿಗೂ ಕೇಳಿಲ್ವಲ್ಲಾ' ಎಂದು ಸೋಜಿಗ ವ್ಯಕ್ತಪಡಿಸಿದರು. ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡ ಕಾರ್ತಿಕ್ ನಂತರ ಪಕ್ಷ ಬದಲಾಯಿಸಿದ್ದರು. ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್ಗೆ ಮುಳುವಾಯಿತೇ?.