ಬಾಲಿವುಡ್ ನಟ ಸಂಜಯ್ ದತ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸಿನಿ ಸದಸ್ಯರು, ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಶುಭಾಶಯಗಳ ಮಳೆ ಹರಿಸಿದ್ದಾರೆ. ಸಂಜಯ್ ದತ್ ಜನ್ಮದಿನ ಸಲುವಾಗಿ ಅವರ ಮುಂದಿನ ಚಿತ್ರದ ಅಪ್ಡೇಟ್ಸ್ ಹೊರಬಿದ್ದಿದೆ.
ಸ್ಮಾರ್ಟ್ ಶಂಕರ್ ಸೀಕ್ವೆಲ್:ಲವರ್ ಬಾಯ್ ಇಮೇಜ್ ಹೊಂದಿದ್ದ ರಾಮ್ ಪೋತಿನೇನಿ 'ಸ್ಮಾರ್ಟ್ ಶಂಕರ್' ಚಿತ್ರದ ಮೂಲಕ ಮಾಸ್ ಇಮೇಜ್ ಅನ್ನೂ ತಮ್ಮದಾಗಿಸಿಕೊಂಡರು. ಸದ್ಯ ಯಶಸ್ವಿ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದಾರೆ. ಇದೀಗ 'ಸ್ಮಾರ್ಟ್ ಶಂಕರ್' ಚಿತ್ರದ ಮುಂದುವರಿದ ಭಾಗವಾಗಿ 'ಡಬಲ್ ಇಸ್ಮಾರ್ಟ್' ಸಿನಿಮಾ ಮಾಡುತ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
'ಡಬಲ್ ಇಸ್ಮಾರ್ಟ್' ಪೋಸ್ಟರ್:ಆದರೆ ಈ ಸಿನಿಮಾದ ವಿಲನ್ ಮತ್ತು ನಾಯಕಿ ಕುರಿತು ಈವರೆಗೆ ಘೋಷಣೆಯಾಗಿರಲಿಲ್ಲ. ಆ ಪಾತ್ರಗಳಿಗೆ ಯಾರು ಬಣ್ಣ ಹಚ್ಚಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿತ್ತು. ವಿಲನ್ ಪಾತ್ರದಲ್ಲಿ ಬಾಲಿವುಡ್ ನಟರು ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ 'ಡಬಲ್ ಇಸ್ಮಾರ್ಟ್' ಚಿತ್ರತಂಡ ಪೋಸ್ಟರ್ ಒಂದನ್ನು ಅನಾವರಣಗೊಳಿಸಿ, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಡಬಲ್ ಇಸ್ಮಾರ್ಟ್ ಸಿನಿಮಾ ವಿಲನ್?ಬಿಗ್ ಬುಲ್ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಪೋಸ್ಟರ್‌ನಲ್ಲಿ ಖಳನಾಯಕನೆಂದು ಘೋಷಿಸಿಲ್ಲ. ಸಂಜಯ್ ದತ್ 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಪವರ್ ಫುಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಈ 'ಡಬಲ್ ಇಸ್ಮಾರ್ಟ್'ನಲ್ಲಿ ಅವರೇ ವಿಲನ್ ಎಂಬುದು ಬಹುತೇಕ ಖಚಿತ. ಪೋಸ್ಟರ್‌ನಲ್ಲಿ ಸಂಜಯ್ ದತ್ ಲುಕ್ ಅದ್ಭುತವಾಗಿದೆ. ಬ್ಲ್ಯಾಕ್ ಸೂಟ್‌ನಲ್ಲಿ ಸ್ಟೈಲಿಶ್ ಹೇರ್ ಸ್ಟೈಲ್ ಮತ್ತು ದಾಡಿ ಬಿಟ್ಟು ವಿಲನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚಿನ ನಟನ ಈ ನೋಟಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮೊದಲ ದಿನದ ಕಲೆಕ್ಷನ್ ಡೀಟೆಲ್ಸ್
'ಇಸ್ಮಾರ್ಟ್ ಶಂಕರ್' ರಾಮ್ ಪೋತಿನೇನಿ ಮುಖ್ಯಭೂಮಿಕೆಯ ಸಿನಿಮಾ. ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಡಬಲ್ ಇಸ್ಮಾರ್ಟ್‌ನಲ್ಲಿ ನಟನ ಲುಕ್ ಅನ್ನು ಡಬಲ್ ರೇಂಜ್‌ನಲ್ಲಿ ತೋರಿಸಲಾಗುವುದು ಎಂದು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. 'ಲೈಗರ್' ಸಿನಿಮಾದಿಂದ ಕೈ ಸುಟ್ಟುಕೊಂಡಿರುವ ನಿರ್ದೇಶಕ ಪುರಿ ಜಗನ್ನಾಥ್ ಈ 'ಡಬಲ್ ಇಸ್ಮಾರ್ಟ್'ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ಮಾರ್ಚ್ 8ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಪುರಿ ಜಗನ್ನಾಥ್ ಮತ್ತು ಚಾರ್ಮಿ ಸೇರಿ ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾರಾ? ಮಾನ್ಸೂನ್ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಿಲ್ಲಿವೆ